

ಗಂಗಾಧರ್ ಬೈರಾಪಟ್ಟಣ ರಾಮನಗರ
ವಿದ್ಯುತ್ ಕಣ್ಣಾಮುಚ್ಚಾಲೆ ಒಂದೆಡೆ ರೈತರಿಗೆ ಸಂಕಷ್ಟ ತಂದೊಡ್ಡಿದ್ದರೆ, ಅತ್ತ ಎಸ್ಕಾಂ ಅಧಿಕಾರಿಗಳು ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬೆಸ್ಕಾಂ ಈಗ ರಾಮನಗರದಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿದ್ದು, ಇದಕ್ಕಾಗಿ ಟೆಂಡರ್ ಸಹ ಕರೆದಿದೆ.
ಮಳೆ ಕೊರತೆಯಿಂದ ವಿದ್ಯುತ್ ಜಲಾಗಾರಗಳಲ್ಲಿ ಉತ್ಪಾದನೆಯನ್ನು ಕುಂಠಿತಗೊಳಿಸಿದ್ದರೆ ಗೃಹ ಮತ್ತು ಪಂಪ್ಸೆಟ್ ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸಿದೆ. ಇದರ ನಡುವೆ ರೈತರಿಗೆ ಕೊಡಲಾಗುತ್ತಿದ್ದ 7 ತಾಸು ವಿದ್ಯುತ್ ಅನ್ನು ಕೇವಲ 2 ಗಂಟೆಗೆ ಇಳಿಸುವ ಮೂಲಕ ರೈತರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸೋಲಾರ್ ವಿದ್ಯುತ್ ಉತ್ಪಾದನೆ ಮೊರೆ ಹೋಗಿದ್ದು, ಪ್ರಸ್ತುತ ಇರುವ ವಿದ್ಯುತ್ ಕೊರತೆ ಸರಿದೂಗಿಸುವ ಕೆಲಸಕ್ಕೆ ಕೈ ಹಾಕಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಮ್ಮ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮೂಲಕ ಸ್ವಾವಲಂಬಿಯಾಗಲು ಟೆಂಡರ್ ಆಹ್ವಾನಿಸಿದೆ. ಜಿಲ್ಲೆಯಲ್ಲಿಯೂ 700 ಎಕರೆ ಕಂದಾಯ ಭೂಮಿಯಲ್ಲಿ ಸೋಲಾರ್ ಅಳವಡಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಜತೆಗೆ ಬೆಸ್ಕಾಂ ಸ್ವಯಂ ಉತ್ಪಾದನೆಗೆ ಮುಂದಾದರೆ ಕೊರತೆ ನೀಗಿಸಲು ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಸುಮಾರು 90 ಸಾವಿರ ಕೃಷಿ ಪಂಪ್ ಸೆಟ್ಗಳಿದ್ದು, ಇವುಗಳಿಗೆ ಪ್ರತಿ ದಿನ 600 ಮೆಗಾ ವಾಟ್ ವಿದ್ಯುತ್ನ ಅಗತ್ಯವಿದೆ. ಆದರೆ ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆ ಕುಸಿದ ಕಾರಣ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ 150 ಮೆಗಾವಾಟ್ ವಿದ್ಯುತ್ ಕೊರತೆ ಎದುರಾಗಿದೆ. 700 ಎಕರೆ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಟಕ ಆರಂಭಗೊಂಡರೆ ಇದರಿಂದ ಸುಮಾರು 140 ಮೆ.ವಾಟ್ ದೊರೆಯಲಿದ್ದು, ಇದನ್ನು ರೈತರ ಕೃಷಿ ಪಂಪ್ಸೆಟ್ಗಳಿಗೆ ಬಳಕೆ ಮಾಡುವ ಚಿಂತನೆಯೂ ಇದೆ.
ಈ ಯೋಜನೆ ಜಿಲ್ಲೆಯಲ್ಲಿ ಕಾರ್ಯಗತಗೊಂಡರೆ ರೈತರು ಪ್ರಸ್ತುತ ಎದುರಿಸುತ್ತಿರುವ ತೊಂದರೆಗೆ ಮುಕ್ತಿ ದೊರೆಯಲಿದೆ. ಗುಣಮಟ್ಟದ ವಿದ್ಯುತ್ ಪೂರೈಕೆಗೆ ಎಚ್ವಿಡಿಎಸ್ ಟಿಸಿಗಳು ಸಹಕಾರಿಯಾಗಿದ್ದರೂ, ಪೂರೈಕೆಯಲ್ಲಿಯೇ ಕೊರತೆ ಇರುವ ಕಾರಣ, ರಾತ್ರಿ ವೇಳೆ ರೈತರು ವಿಷ ಜಂತುಗಳು ಹಾಗೂ ಕಾಡು ಪ್ರಾಣಿಗಳ ದಾಳಿಗಳ ಭಯದಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಯೋಜನೆ ಜಾರಿಯಿಂದ ಹಗಲು ವೇಳೆಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ.
ಈಗಾಗಲೇ ಪಂಪ್ಸೆಟ್ಗಳಿಗೆ ಆನ್ ಗ್ರಿಡ್ನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವ ಸರ್ಕಾರ ಸ್ಟಾಂಡ್ ಅಲೋನ್ / ಆಫ್ ಗ್ರಿಡ್ ಯೋಜನೆ ಮೂಲಕ ಪ್ರತಿ ಪಂಪ್ಸೆಟ್ಗಳನ್ನು ಸೋಲಾರಿಕರಣಗೊಳಿಸಲು ಆದೇಶಿಸಿದೆ.
ಈಗಾಗಲೇ ಆನ್ ಗ್ರಿಡ್ನ ಪೂರೈಕೆಯ ಕೊನೇ ಹಂತದಿಂದ ಕೇವಲ 500 ಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ರೈತರ ಪಂಪ್ಸೆಟ್ಗೆ ಸಂಪರ್ಕ ನೀಡಲಿದೆ. ಒಂದು ವೇಳೆ 500 ಮೀಟರ್ ಮೀರಿದರೆ ಅಂತದ ಪಂಪ್ಸೆಟ್ಗಳಿಗೆ ಆಫ್ ಗ್ರಿಡ್ ಸೋಲಾರ್ ಹಾಕಿಸಿಕೊಂಡು ಸಂಪರ್ಕ ಪಡೆಯಬಹುದಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ಶೇ.80 ಸಬ್ಸಿಡಿ ಸಹ ದೊರೆಯಲಿದೆ.
ರಾಮನಗರದಿಂದ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿ ವಿದ್ಯುತ್ ಉತ್ಪಾದನೆಗೆ ಬೆಸ್ಕಾಂನಿಂದ ಟೆಂಡರ್ ಕರೆಯಲಾಗಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ. ನಾಗರಾಜು, ಇಇ ಬೆಸ್ಕಾಂ, ರಾಮನಗರ ವಿಭಾಗ