

ಯಲ್ಲಾಪುರ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಕೆಲವೆಡೆ ತಾಂತ್ರಿಕ ದೋಷದಿಂದ ಬೆರಳಚ್ಚು ಪಡೆಯದೆ, ಸಾರ್ವಜನಿಕರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿಯ ಸದಸ್ಯರು ದೂರಿದರು. ಪ್ರತಿಕ್ರಿಯಿಸಿದ ಆಹಾರ ನಿರೀಕ್ಷಕ ರಾಘವೇಂದ್ರ ಗೌಡ, ಬೆರಳಚ್ಚು ಪಡೆಯಲಾಗದಿದ್ದರೆ, ಕಣ್ಣಿನ ಮಾದರಿಯನ್ನು ಪಡೆದು ಪಡಿತರ ವಿತರಿಸಬಹುದು. ಅದೂ ಸಾಧ್ಯವಾಗದಿದ್ದರೆ ಪಡಿತರ ವಿತರಕರು ಆ ಸಮಸ್ಯೆಯನ್ನು ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದರು.
ಸಾರಿಗೆ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ, ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಮಾಹಿತಿ ನೀಡಿದರು. ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ತಾಪಂ ಇಒ ರಾಜೇಶ ಧನವಾಡಕರ ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.