

ಮಡಿಕೇರಿ:
ಕಳೆದ ೨-೩ ದಿನಗಳಿಂದ ಸುರಿಯುತ್ತಿರುವ ಮಳೆಯ ಮಧ್ಯೆಯೇ ಜೀವ ನದಿ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಸಿದ್ಧತೆ ಭರದಿಂದ ನಡೆದಿದೆ. ಈ ಬಾರಿ ನಡುರಾತ್ರಿ ಪವಿತ್ರ ತೀಥೋದ್ಭವ ಸಂಭವಿಸುವುದರಿಂದ ಜಿಲ್ಲಾಡಳಿತ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ. ಮಳೆಯ ವಾತಾವರಣ ಮುಂದುವರಿಯುವ ಲಕ್ಷಣಗಳು ದಟ್ಟವಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಪಂಚಾಂಗದ ಪ್ರಕಾರ ಈ ತಿಂಗಳು ೧೭ರ ಮಂಗಳವಾರ ರಾತ್ರಿ ೧.೨೭ ನಿಮಿಷಕ್ಕೆ ಕರ್ಕಾಟಕ ಲಗ್ನದಲ್ಲಿ ನಡೆಯಲಿದೆ. (ಕ್ಯಾಲೆಂಡರ್ ಪ್ರಕಾರ ಅ.೧೮ರ ಬುಧವಾರ ಬೆಳಗ್ಗೆ ೧.೨೭) ತೀರ್ಥೋದ್ಭವದ ನಂತರ ಒಂದು ತಿಂಗಳು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ. ತುಲಾ ಸಂಕ್ರಮಣದಿಂದ ಆರಂಭವಾಗಿ ಕಿರು ಸಂಕ್ರಮಣದ ತನಕದ ಒಂದು ತಿಂಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಎರಡೂ ಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ.
ಕೊಡಗಿನವರ ಪ್ರಮುಖ ಹಬ್ಬಗಳಲ್ಲಿ ಕಾವೇರಿ ಸಂಕ್ರಮಣವೂ ಒಂದು. ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥೋದ್ಭವದ ನಂತರ ಈ ಹಬ್ಬ ಆಚರಿಸಲಾಗುತ್ತದೆ. ಗಂಗಾ ನದಿ ಕಾವೇರಿಯೊಂದಿಗೆ ಸೇರಿಕೊಳ್ಳುವ ಸಂದಭರ್ದಲ್ಲಿ ತೀರ್ಥೋದ್ಭವ ಆಗುತ್ತದೆ ಎನ್ನುವುದು ಆಸ್ತಿಕರ ನಂಬಿಕೆಯಾಗಿದ್ದು, ನಂತರದ ಒಂದು ತಿಂಗಳಲ್ಲಿ ಶ್ರೀ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಯ ಪವಿತ್ರ ಕೊಳದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ಬರುತ್ತದೆ ಎನ್ನಲಾಗುತ್ತದೆ.
ತೀರ್ಥೋದ್ಭವ ಸಂದರ್ಭದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ ಎನ್ನುವ ನಂಬಿಕೆಯೂ ಇದೆ. ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತೀರ್ಥೋದ್ಭವ ದಿನ ಮತ್ತು ನಂತರದ ಜಾತ್ರೆಯ ಒಂದು ತಿಂಗಳಲ್ಲಿ ಪಿಂಡ ಪ್ರದಾನ ಮಾಡುವುದರಿಂದ ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ಪ್ರತೀತಿ ಇರುವದರಿಂದ ವಿವಿಧ ಕಾರಣಕ್ಕೆ ಬೇರೆ ಬೇರೆ ಕಡೆ ನೆಲೆಸಿರುವ ಕೊಡಗು ಮೂಲದವರು ತುಲಾಸಂಕ್ರಮ ಜಾತ್ರೆಯ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಿಂಡ ಪ್ರದಾನ ಮಾಡಿಸುತ್ತಾರೆ.
ತೀರ್ಥೋದ್ಭವದ ಸಂದಭರ್ದಲ್ಲಿ ಕೊಡಗು ಮಾತ್ರವಲ್ಲದೆ ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಭಕ್ತರು ಭಾಗಮಂಡಲ, ತಲಕಾವೇರಿಗೆ ಬರುತ್ತಾರೆ. ಈ ಬಾರಿಯ ತೀರ್ಥೋದ್ಭವ ನಡುರಾತ್ರಿ ಆಗುತ್ತಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ಇಂಥ ಸನ್ನಿವೇಶ ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ. ರಾತ್ರಿ ವೇಳೆಯಲ್ಲಿ ತೀಥೋದ್ಭವ ಸಂಭವಿಸುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಭಾಗಮಂಡಲ-ತಲಕಾವೇರಿ ದೇವಾಲಯ ಸಮಿತಿ, ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ವಾಹನ ನಿಲುಗಡೆ, ಕುಡಿಯುವ ನೀರು, ಶೌಚಾಲಯ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ, ಭಾಗಮಂಡಲದಿಂದ ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದು, ರಸ್ತೆ ಬದಿಯ ಕುರುಚಲು ಗಿಡಗಳನ್ನು ತೆರವು ಮಾಡುವುದು ಸೇರಿದಂತೆ ಅಗತ್ಯ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ. ಜಾತ್ರೆ ಹಿನ್ನೆಲೆಯಲ್ಲಿ ಅಗತ್ಯ ಕೆಲಸಗಳಿಗಾಗಿ ಭಾಗಮಂಡಲ ಗ್ರಾಮ ಪಂಚಾಯಿತಿಗೆ ಸರ್ಕಾರ ಸೂಕ್ತ ಅನುದಾನವನ್ನೂ ಕೊಡುತ್ತಿದೆ.
ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಈಗಾಗಲೇ ಶಾಶ್ವತ ಸಿ.ಸಿ.ಟಿ.ವಿ ಅಳವಡಿಸಲಾಗಿದೆ. ಧ್ವನಿವರ್ಧಕದ ವ್ಯವಸ್ಥೆಯೂ ಇದೆ. ತೀರ್ಥೊದ್ಭವ ಸಂದಭರ್ದಲ್ಲಿ ಅನಗತ್ಯ ಗೊಂದಲ ಮತ್ತು ನೂಕುನುಗ್ಗಲು ತಪ್ಪಿಸುವ ಉದ್ದೇಶದಿಂದ ತೀರ್ಥ ವಿತರಣೆಯನ್ನು ಶಿಸ್ತುಬದ್ಧಗೊಳಿಸಲು ಕೂಡ ಯೋಜನೆ ರೂಪಿಸಲಾಗಿದೆ. ಬ್ರಹ್ಮಕುಂಡಿಕೆ ಮತ್ತು ಸ್ನಾನದ ಕೊಳದ ಬಳಿ ತೀರ್ಥೋದ್ಭವ ವೇಳೆ ತಳ್ಳಾಟ ಉಂಟಾಗುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಜಾತ್ರೆಯ ಅವಧಿಯಲ್ಲಿ ತಲಕಾವೇರಿಯಲ್ಲಿ ಭಕ್ತರಿಗೆ ಅನ್ನದಾನದ ವ್ಯವಸ್ಥೆಯೂ ಇರಲಿದೆ.
ತುಲಾಸಂಕ್ರಮಣ ಜಾತ್ರೆಯ ಸಿದ್ಧತೆ ಪ್ರತಿ ವರ್ಷ ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ನಡೆಯುತ್ತಿತ್ತು. ಈ ಬಾರಿ ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಖುದ್ದು ಜಿಲ್ಲಾಧಿಕಾರಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆಗಾಗ್ಗೆ ಭಾಗಮಂಡಲ-ತಲಕಾವೇರಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಕಾವೇರಿ ತುಲಾ ಸಂಕ್ರಮಣ ಜಾತ್ರೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತರಿಗೆ ತೊಂದರೆ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಮುತುವರ್ಜಿಯಿಂದ ಸಿದ್ಧತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಚಂದ್ರಶೇಖರ್ ಎನ್.ಜಿ., ಪ್ರಭಾರ ಹೆಚ್ಚುವರಿ ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ
ಈ ಬಾರಿ ನಡುರಾತ್ರಿ ತೀಥೋದ್ಭವ ಆಗುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಮಳೆಯ ವಾತಾವರಣವೂ ಇರುವುದರಿಂದ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಭಾಗಮಂಡಲ-ತಲಕಾವೇರಿ ಮಧ್ಯೆ ವಾಹನಗಳ ಸುಗಮ ಸಂಚಾರಕ್ಕೂ ವ್ಯವಸ್ಥೆ ಮಾಡಬೇಕಿದೆ.
ಶಬರೀಷ್ ಕುದುಕುಳಿ, ಭಾಗಮಂಡಲ ನಿವಾಸಿ