

ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಹಿರೀಸಾವೆ
ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನ.9 ರಿಂದ 13 ರವರೆಗೆ 5 ದಿನಗಳ ಕಾಲ ಬೃಹತ್ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪಾಶೀರ್ವಾದ, ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ಶ್ರೀ ಶಂಭುನಾಥಸ್ವಾಮೀಜಿ ಅವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಜರುಗಲಿದ್ದು ನ.9ರಂದು ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಜಾನುವಾರುಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು ನಿತ್ಯವೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ನಿತ್ಯ ವಿವಿಧ ಬಗೆಯ ಪುಷ್ಪಗಳ ಅಲಂಕಾರದ ಜತೆಗೆ ಪಂಚಾಭಿಷೇಕ, ಆಭರಣಾಲಂಕಾರ ಹಾಗೂ ಪೂಜಾ ಕೈಂಕರ್ಯಗಳು ನಡೆಯಲಿವೆ.
ಪಂಚಲಿಂಗ ಕ್ಷೇತ್ರ: ಶ್ರೀ ಕ್ಷೇತ್ರ ಕಬ್ಬಳಿಯು ಶ್ರೀ ಕಲ್ಲೇಶ್ವರ, ಶ್ರೀ ಮಲ್ಲೇಶ್ವರ, ಶ್ರೀ ಸೋಮೇಶ್ವರ, ಶ್ರೀ ಭೈರವೇಶ್ವರ ಹಾಗೂ ಶ್ರೀ ಬಸವೇಶ್ವರ ಎಂಬ ಪಂಚ ಲಿಂಗಗಳಿಂದ ಕೂಡಿರುವ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಹಲವು ವರ್ಷಗಳಿಂದ ತನ್ನದೆ ಆದ ವಿಶಿಷ್ಟತೆಯೊಂದಿಗೆ ಭಕ್ತಿ ಭಾವದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆಯುತ್ತಾ ಬಂದಿದೆ.
ಧಾರ್ಮಿಕ ಕಾರ್ಯಕ್ರಮಗಳು
ನ.9 ರಂದು ಮುಂಜಾನೆ ಮಂಡಲೀಕನಹಳ್ಳಿ ಗ್ರಾಮಸ್ಥರಿಂದ ದೇಗುಲಕ್ಕೆ ಹೂವಿನ ಚಪ್ಪರ, ಗೋಪೂಜೆ, ಪುಣ್ಯಾಹ ರುದ್ರಾಭಿಷೇಕದ ಬಳಿಕ ಚುಂಚಶ್ರೀಗಳಿಂದ ಧರ್ಮಧ್ವಜಾರೋಹಣದ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಸಂಜೆ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ವಾರ್ಷಿಕೋತ್ಸವ. 10ರಂದು ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಂಜೆ ರಾಷ್ಟ್ರಕವಿ ಕುವೆಂಪು ರಚಿತ ಬೊಮ್ಮನಹಳ್ಳಿ ಕಿಂದರಜೋಗಿ ನಾಟಕ ಪ್ರದರ್ಶನ. 11ರಂದು ಶ್ರೀ ಬಸವೇಶ್ವರಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿ ದೇವಿ ಉತ್ಸವ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಮತ್ತು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ, ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಹಾಗೂ ಧಾರ್ಮಿಕ ಸಭೆ ಜರುಗಲಿದೆ.
12ರಂದು ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 13ರಂದು ಬೆಳಗ್ಗೆ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವಿದೆ. ಬೆಂಗಳೂರಿನ ಪ್ರದೀಪಾ ವೆಂಕಟೇಶ್ ಪ್ರಸಾದ್ ಅವರ ಕುಟುಂಬ ನಡೆಸಿಕೊಡಲಿದೆ. ಗಂಗಾಪೂಜೆ ಬಳಿಕ ಧರ್ಮಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ತೆಪ್ಪೋತ್ಸವ: ನ.11ರಂದು ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವದ ಬಳಿಕ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ವಿದ್ಯುತ್ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರ ಪುತ್ಥಳಿ ಹಾಗೂ ಶ್ರೀ ಚೌಡೇಶ್ವರಿದೇವಿ ಪ್ರತಿಷ್ಠಾಪಿಸಲಿದ್ದು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರತ್ನಸಿಂಹಾಸನ ಅಲಂಕರಿಸಿದ ಬಳಿಕ ಶ್ರೀ ಶಂಭುನಾಥಸ್ವಾಮೀಜಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತೆಪ್ಪೋತ್ಸವವು ಭಕ್ತರ ಜೈಕಾರದೊಂದಿಗೆ ಪುಷ್ಕರಣಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಬರಲಿದೆ. ಭಕ್ತರು ದೀಪ ಬೆಳಗಿಸಿ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ.
ಕ್ಷೇತ್ರದ ಮಹಿಮೆ: ಹಾವು, ಚೇಳು ಇತ್ಯಾದಿ ವಿಷಜಂತುಗಳು ಕಚ್ಚಿದರೆ ಈ ಕ್ಷೇತ್ರಕ್ಕೆ ಕರೆತಂದು ಮೆರೆ ವಿಗ್ರಹವಿರುವ ದೇವಾಲಯದಲ್ಲಿ ತೀರ್ಥವನ್ನು ಕುಡಿಸಿದಲ್ಲಿ ವಿಷವು ಮಾಯವಾಗಿ ಗುಣಮುಖರಾಗುತ್ತಾರೆ. ಶ್ರೀ ಬಸವೇಶ್ವರಸ್ವಾಮಿಯು ಜಾನುವಾರುಗಳನ್ನು ರಕ್ಷಿಸುವ ಮಹಾನ್ ದೈವನಾಗಿದ್ದು, ಯಾವುದೇ ರೋಗ ರುಜಿನಗಳು ಬಾರದಂತೆ ಕಾಯುತ್ತಾನೆ ಎಂಬ ನಂಬಿಕೆ ಜನರಲ್ಲಿದೆ.
ಸಿಪ್ಪೆ ತೆಂಗಿನಕಾಯಿ ವ್ಯಾಪಾರ: ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಸೋಮವಾರ ಇಲ್ಲಿ ಸಿಪ್ಪೆ ತೆಂಗಿನಕಾಯಿ ವ್ಯಾಪಾರದ ಸಂತೆ ನಡೆಯುತ್ತದೆ. ಇಲ್ಲಿ ವ್ಯಾಪಾರವಾಗದಿದ್ದ ಕಾಯಿಗಳನ್ನು ರೈತರು ಇಲ್ಲಿಯೇ ಬಿಟ್ಟು ಹೋಗಿ ಮತ್ತೆ ಮುಂದಿನ ವಾರ ಅಥವಾ ಯಾವಾಗ ಬೇಕಾದರೂ ಬಂದು ವ್ಯಾಪಾರ ನಡೆಸಬಹುದು. ಅಲ್ಲಿಯವರೆಗೂ ಕಾಯಿಗಳನ್ನು ಯಾರೂ ಸಹ ಮುಟ್ಟುವುದಿಲ್ಲ. ಇಲ್ಲಿ ಬಸವೇಶ್ವರ ಕಾಯುತ್ತಿದ್ದಾನೆ ಎಂಬ ದೃಢನಂಬಿಕೆ ಜನರದ್ದಾಗಿದೆ.
ಆದಿಚುಂಚನಗಿರಿ ಮಠದ ನಿರ್ವಹಣೆ: 1998ರಲ್ಲಿ ಗ್ರಾಮಸ್ಥರು ಶ್ರೀ ಕ್ಷೇತ್ರ ಕಬ್ಬಳಿಯ ಸಂಪೂರ್ಣ ಒಡೆತನವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ವಹಿಸಲಾಯಿತು. ಅಂದಿನಿಂದ ಗ್ರಾಮಸ್ಥರೊಂದಿಗೆ ನಿತ್ಯ ಪೂಜಾ ಕೈಂಕರ್ಯಗಳು, ಕಾರ್ತಿಕ ಮಾಸದಲ್ಲಿ ಜಾತ್ರಾ ಮಹೋತ್ಸವ ಹಾಗೂ ಧನುರ್ಮಾಸದ ಜವಾಬ್ದಾರಿ, ಪ್ರತಿನಿತ್ಯ ದಾಸೋಹ ವ್ಯವಸ್ಥೆ, ಪುರಾತನ ದೇಗುಲಗಳ ಜೀರ್ಣೋದ್ಧಾರ, ಸಮುದಾಯ ಭವನ, ಕಲ್ಯಾಣಿ, ಶಿಕ್ಷಣ ವ್ಯವಸ್ಥೆ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ದೇಗುಲ ನಿರ್ಮಾಣ ಕಾರ್ಯ ಪ್ರಗತಿ
ಶ್ರೀ ಕ್ಷೇತ್ರವನ್ನು ವಹಿಸಿಕೊಂಡ ನಂತರ ಗ್ರಾಮದಲ್ಲಿರುವ ಬಹುತೇಕ ದೇಗುಲಗಳನ್ನು ಜೀರ್ಣೋದ್ಧಾರಗೊಳಿಸಿರುವ ಆದಿಚುಂಚನಗಿರಿ ಮಠವು ಪ್ರಸಕ್ತ ವರ್ಷದಲ್ಲಿ ಭಕ್ತರ ಸಹಕಾರದೊಂದಿಗೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರಪಾಲಕ ಶ್ರೀ ಬಸವೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದೆ.
ಶ್ರೀ ಕ್ಷೇತ್ರಕ್ಕೆ ಹೇಮಾವತಿ ನೀರು: ಶ್ರೀ ಕ್ಷೇತ್ರ ಕಬ್ಬಳಿ ವ್ಯಾಪ್ತಿಯ ಕೆರೆ-ಕಟ್ಟೆಗಳು ಹಾಗೂ ಕಲ್ಯಾಣಿ ತುಂಬಿಸುವುದು ಚುಂಚಶ್ರೀಗಳ ಬಹುದಿನದ ಕನಸಾಗಿತ್ತು. ಹಲವು ವರ್ಷಗಳಿಂದ ನೀರಿಲ್ಲದೆ ಜಾತ್ರೆ ಹಾಗೂ ಮಠದ ನಿರ್ವಹಣೆ ಕಷ್ಟವಾಗಿತ್ತು. ಜತೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಸದ್ಯ ಜಿಲ್ಲೆಯ ಹೃದಯ ಭಾಗದ ಮೂಲಕ ತುಮಕೂರು ಜಿಲ್ಲೆಗೆ ಹಾದುಹೋಗುತ್ತಿರುವ ಹೇಮೆಯ ನೀರನ್ನು ಹೊಂಗೆಲಕ್ಷ್ಮೀ ಕ್ಷೇತ್ರದ ಬಳಿಯಿಂದ ಏತನೀರಾವರಿ ಯೋಜನೆಯಡಿ 240 ಎಚ್‌ಪಿ ಸಾಮರ್ಥ್ಯದ 2 ಮೋಟಾರ್ ವ್ಯವಸ್ಥೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ನೀರು ತರಲಾಗಿದೆ. ಕಲ್ಯಾಣಿ ತುಂಬಿದ್ದು ಕೆರೆ-ಕಟ್ಟೆಗಳಿಗೆ ನೀರು ಹರಿಯುತ್ತಿದೆ.
ಸಕಲ ವ್ಯವಸ್ಥೆ: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಕ್ತರ ಮುಡಿ ಹಾಗೂ ಸ್ನಾನಕ್ಕೆ ನೀರಿನ ವ್ಯವಸ್ಥೆ, ಪೂಜೆ ಹಾಗೂ ಭಜನೆಗೆ ಮುಕ್ತ ಸ್ಥಳಾವಕಾಶ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಸಂಪ್ರದಾಯದಂತೆ ಈ ಬಾರಿಯೂ ದನಗಳ ಜಾತ್ರಾ ಮಹೋತ್ಸವ, ಸರ್ಪೋತ್ಸವ, ಮುತ್ತಿನಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ.