

ಕುಂದಾಪುರ: ಮುಂಬರುವ ಬಜೆಟ್ ಅಧಿವೇಶನ ಮುಗಿದ ತಕ್ಷಣ ಮುಂದಿನ ಹಂತದ 94ಸಿ ಹಕ್ಕುಪತ್ರಗಳ ವಿತರಣೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ವಂಡ್ಸೆ ಹೋಬಳಿ 94ಸಿ ಹಾಗೂ ಬಗರ್ ಹುಕುಂ ಕಡತ ಪರಿಶೀಲನೆ ಹಾಗೂ ವಿಲೇವಾರಿ ಸಂಬಂಧ ಕುಂದಾಪುರ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದರು.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆ ಹೋಬಳಿ ಗ್ರಾಮಗಳ 94ಸಿ ಅರ್ಜಿಗಳ ತ್ವರಿತ ವಿಲೇವಾರಿ ಆಗಬೇಕು. ಆ ವ್ಯಾಪ್ತಿಯ ಗ್ರಾಮಗಳಲ್ಲಿ 94ಸಿ ಅಡಿ ಅರ್ಜಿ ಹಾಕಿ ಭೂಮಿ ಹಕ್ಕಿಗೆ ಕಾಯುತ್ತಿರುವ ಅರ್ಹರನ್ನು ಹುಡುಕಿ ಅವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಈಗಾಗಲೇ 2023 ಏಪ್ರಿಲ್‌ನಿಂದ ಈವರೆಗೆ 275ಮಂದಿಗೆ 94ಸಿ ಹಕ್ಕುಪತ್ರ ನೀಡಲಾಗಿದೆ. ಬಾಕಿ ಇರುವ ಅರ್ಜಿಗಳ ತ್ವರಿತವಾಗಿ ವಿಲೇವಾರಿ ಮಾಡಿ ಬಡವರಿಗೆ ಭೂ ಮಂಜೂರಾತಿ ಮಾಡುವ ಜವಾಬ್ದಾರಿ ಇರುವುದರಿಂದ ಬಜೆಟ್ ಅಧಿವೇಶನ ಮುಗಿದ ತಕ್ಷಣ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕೆಂದು ಎಂದರು. ಕುಂದಾಪುರ ತಹಸೀಲ್ದಾರ್ ಮಲ್ಲಿಕಾರ್ಜುನ್, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ವಂಡ್ಸೆ ಹೋಬಳಿಯಲ್ಲಿ ನಮೂನೆ 50, 53 ಹಾಗೂ 57ರಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿ ಬಾಕಿ ಇರುವುದು ಗಮನದಲ್ಲಿದೆ. ಎಲ್ಲ ಅರ್ಹ ಅರ್ಜಿ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಗ್ರಾಮ ಆಡಳಿತ ಅಧಿಕಾರಿಗಳು ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಕಾಲ ಮಿತಿಯಲ್ಲಿ ಮಾಡಬೇಕು. ಗುರುರಾಜ್ ಗಂಟಿಹೊಳೆ ಶಾಸಕ