ಸ್ವಾತಂತ್ರ್ಯೋತ್ಸವ ಪಾಕ್ಷಿಕ ದಿನಾಚರಣೆ ಆಯೋಜನೆಗೆ ಸಿದ್ಧತೆ

17 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ್ಯ ಹೋರಾಟದಲ್ಲಿ ಧಾರವಾಡ ಜಿಲ್ಲೆ ಪಾತ್ರ ಮಹತ್ವದ್ದು. ಹೀಗಾಗಿ ಆ. 1ರಿಂದ 14ರವರೆಗೆ ಜಿಲ್ಲಾಡಳಿತದಿಂದ ನಮ್ಮ ಜಿಲ್ಲೆಯ ಐತಿಹಾಸಿಕ ಹಿನ್ನೋಟ, ಭವ್ಯ ಭವಿಷ್ಯದ ಮುನ್ನೋಟ ಆಶಯದಲ್ಲಿ ಸ್ವಾತಂತ್ರ್ಯೋತ್ಸವದ ಪಾಕ್ಷಿಕ ದಿನಾಚರಣೆ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಜಿಲ್ಲೆಯ ಪಾತ್ರ, ಮಹತ್ವದ ಗುರುತುಗಳ ದಾಖಲೀಕರಣ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಸಹಕಾರ ಚಳವಳಿಯಿಂದ ಚಲೇಜಾವ ಚಳವಳಿವರೆಗೆ ಜಿಲ್ಲೆಯ ಅನೇಕರು ಭಾಗವಹಿಸಿ, ತಮ್ಮ ಆಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಹುತಾತ್ಮರ ಸ್ಮಾರಕಗಳು, ಸಂಸ್ಥೆಗಳು ಇವತ್ತಿಗೂ ಇವೆ. ಇವುಗಳ ಕುರಿತು ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ.ಈರಣ್ಣ ಪತ್ತಾರ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನವಾದ ಅನೇಕರ ಸ್ಮಾರಕಗಳು, ಹೊರಾಟಕ್ಕೆ ಸಹಾಯ ಮಾಡಿದ ಅಡಗುದಾಣ ಕಟ್ಟಡಗಳಿವೆ. ಆಧುನಿಕತೆಗೆ ವಾಲಿದರೂ ಅವುಗಳಲ್ಲಿ ಐತಿಹಾಸಿಕತೆ ಕುರುಹು ಸ್ವಲ್ಪ ಮಟ್ಟಿಗೆ ಉಳಿದಿದೆ. ಸಾಕಷ್ಟು ಸಂದರ್ಭದಲ್ಲಿ ಜಿಲ್ಲೆಯ ಇತಿಹಾಸ ದಾಖಲಿಸುವ ನಮ್ಮ ಪ್ರಯತ್ನ ರ್ಪೂಣಗೊಂಡಿಲ್ಲ. ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದು ಹೆಮ್ಮೆ ತಂದಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವಿವಿಧ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿಶೇಷ ರೂಪಕ ಪ್ರದಶಿರ್ಸಲಾಗುವುದು ಎಂದರು.
ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ, ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ವೈ. ಸಾವಂತ, ಕವಿವಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿ.ಎಲ್​.ಪಾಟೀಲ, ಸಂಶೋಧಕ ಪ್ರೊ. ಜೆ.ಎಂ. ನಾಗಯ್ಯ, ಜಿಪಂ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಕೆ.ಪಿ, ಡಾ.ರಾಮೂ ಮೂಲಗಿ, ಇತರರು ಮಾತನಾಡಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್​, ತಹಸೀಲ್ದಾರ ಡಾ. ಡಿ.ಎಚ್​.ಹೂಗಾರ, ಇತರರು ಇದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಡಿಡಿಪಿಐ ಎಸ್​.ಎಸ್​.ಕೆಳದಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net