ಮೊದಲ ಹಂತದ ಗ್ರಾಪಂ ಚುನಾವಣೆಗೆ ಸಕಲ ಸಿದ್ಧತೆ:

Gramayana Election Logo_2020
Published on

ಬೆಂಗಳೂರು: ರಾಜ್ಯದ 117 ತಾಲೂಕುಗಳ 3,019 ಗ್ರಾಪಂಗಳಿಗೆ ಡಿ.22ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. 48,048 ಸದಸ್ಯ ಸ್ಥಾನಗಳ ಪೈಕಿ 432 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿವೆ. ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬೀದರ್ ಜಿಲ್ಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ಬಳಸಿ ಚುನಾವಣೆ ನಡೆಸಲಾಗುತ್ತದೆ.

ಚುನಾವಣಾ ಕಾರ್ಯಕ್ಕೆ 5,847 ಚುನಾವಣಾ ಅಧಿಕಾರಿ ಹಾಗೂ 6,085 ಸಹಾಯಕ ಚುನಾವಣಾ ಅಧಿಕಾರಿಗಳು, ಸುಮಾರು 2,70,268 ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸ ಲಾಗಿದ್ದು, ಸೋಮವಾರ ಬೆಳಗ್ಗೆ ಮತಗಟ್ಟೆ ಸಿಬ್ಬಂದಿಗಳು ಆಯಾ ತಾಲೂಕು ಕೇಂದ್ರಗಳಿಂದ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿದೆ. ಮತದಾರರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು ಕಡ್ಡಾಯ. ಕರೊನಾ ಸೋಂಕಿತರು ಮತ್ತು ಶಂಕಿತರಿಗೆ ಮತದಾನ ಪ್ರಕ್ರಿಯೆ ಕೊನೆಯ ಒಂದು ಗಂಟೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಲಾಗಿದೆ.

  • ಗ್ರಾ.ಪಂ. ಚುನಾವಣೆಯ ವೇಳೆ ತಮ್ಮ ವಿರುದ್ಧ ಎದುರಾಳಿಗಳು ವಾಮಾಚಾರ ಮಾಡಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಕೆಲವೆಡೆ ವಾಮಾಚಾರ ಮಾಡಿರುವ ಕುರುಹುಗಳು ಭಾನುವಾರ ಪತ್ತೆಯಾಗಿವೆ.
  • ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಆಗರದಹಳ್ಳಿ ಭಾಗದ ಹಳ್ಳಿಯೊಂದರಲ್ಲಿ ಅಭ್ಯರ್ಥಿಯೊಬ್ಬ ಪ್ರಚಾರದಲ್ಲಿ ಬಳಸಿದ ಆತನ ಚಿಹ್ನೆಯಾದ 32 ಇಂಚಿನ ಎಲ್​ಇಡಿ ಟಿವಿ ಪ್ರಚಾರದ ವೇಳೆಯೇ ಕಳವಾಗಿದೆ.

ಕಾಯಕಕ್ಕೆ ತಕ್ಕಂತೆ ಲಭಿಸಿದ ಚಿಹ್ನೆ

ದಾವಣಗೆರೆ: ನ್ಯಾಮತಿ ತಾಲೂಕು ಸವಳಂಗ ಗ್ರಾಮದಲ್ಲಿ ಗಿರೀಶ್ ಎಂಬಾತ ಫುಟ್​ವೇರ್ ಅಂಗಡಿ ನಡೆಸುತ್ತಿದ್ದಾರೆ. ಅಲ್ಲಿನ 1ನೇ ವಾರ್ಡ್​ನಲ್ಲಿ ಸ್ಪರ್ಧಿಸಿರುವ ಅವರಿಗೆ ಬಯಸಿದಂತೆ ‘ಪಾದರಕ್ಷೆ’ ಚಿಹ್ನೆ ಒಲಿದಿದೆ! ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ಕೆ.ರಾಜಕುಮಾರ್ ಎಂಬುವರು ಶೂ ಅಂಗಡಿಯೊಂದನ್ನು ನಿರ್ವಹಿಸುತ್ತಿದ್ದಾರೆ. ಜಿಗಳಿ ಪಂಚಾಯಿತಿಯ 1ನೇ ವಾರ್ಡ್​ನಲ್ಲಿ ಸ್ಪರ್ಧಿಸಿದ ಅವರಿಗೂ ಮತಪತ್ರದಲ್ಲಿ ‘ಬೂಟು’ ಮುದ್ರೆಯೊತ್ತಿದೆ!

ಅಂಧರಿಗೆ ಬ್ರೖೆಲ್ ಎಪಿಕ್​ಕಾರ್ಡ್

ಅಂಧರು ಮತ ಚಲಾಯಿಸಲು ಚುನಾವಣಾ ಆಯೋಗ ಅತ್ಯಾಧುನಿಕ ಬ್ರೖೆಲ್ ಲಿಪಿ ಎಪಿಕ್​ಕಾರ್ಡ್ ರೂಪಿಸಿದ್ದು, ಶಿರಾ ವಿಧಾನಸಭೆ ಉಪ ಚುನಾವಣೆಯಲ್ಲಿ ಬಳಸಲಾಗಿತ್ತು. ಮುಂದಿನ ಮತದಾರರ ದಿನಾಚರಣೆ ವೇಳೆಗೆ ದೇಶಾದ್ಯಂತ ಈ ಕಾರ್ಡ್ ವಿತರಿಸುವ ಯೋಜನೆ ಇದೆ. ಅಲ್ಟ್ರಾ ವೈಲೆಟ್ ತಂತ್ರಜ್ಞಾನ ಬಳಸಿ ಕಾರ್ಡ್ ರೂಪಿಸಲಾಗಿದೆ.

ಆರ್​ಬಿಐ ಯೋಜನೆಗೆ ಉಡುಪಿಯ ಐದು ಗ್ರಾಪಂ

ಉಡುಪಿ: ಫೀಚರ್ ಫೋನ್ ಬಳಸಿ ಇಂಟರ್​ನೆಟ್ ರಹಿತ ಡಿಜಿಟಲ್ ಪೇಮೆಂಟ್ ಮಾಡುವ ಭಾರತೀಯ ರಿಸರ್ವ್ ಬ್ಯಾಂಕ್​ನ ಬಹುನಿರೀಕ್ಷಿತ ಪೈಲಟ್ ಯೋಜನೆ ಜಾರಿಗೆ ದೇಶದಲ್ಲೇ ಪ್ರಥಮವಾಗಿ ಉಡುಪಿ ಜಿಲ್ಲೆಯ ಐದು ಗ್ರಾಪಂಗಳು ಆಯ್ಕೆಯಾಗಿವೆ. ಗ್ಲೋಬಲ್ ಕಾರ್ಡ್ ನೆಟ್​ವರ್ಕ್ ‘ವೀಸಾ’, ಖಾಸಗಿ ಬ್ಯಾಂಕ್ ‘ಯೆಸ್ ಬ್ಯಾಂಕ್’, ಡಿಜಿಟಲ್ ವ್ಯಾಲೆಟ್ ವೆಂಚರ್ ‘ಯುವ ಪೇ’ ಸಹಭಾಗಿತ್ವದಲ್ಲಿ ಜಿಲ್ಲೆಯ ಕಾಡೂರು, ಹಾವಂಜೆ, ಕುಕ್ಕೆಹಳ್ಳಿ, ಚೇರ್ಕಾಡಿ, ಇನ್ನಂಜೆ ಗ್ರಾಪಂಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ ಈ ಗ್ರಾಪಂ ವ್ಯಾಪ್ತಿ ಮನೆಗಳಲ್ಲಿ ಇ-ವ್ಯವಹಾರ ನಡೆಸಲಾಗುತ್ತದೆ.

ಮಹಿಳಾ ಅಭ್ಯರ್ಥಿ ಧರಣಿ

ದೇವರಹಿಪ್ಪರಗಿ: ಉಮೇದುವಾರಿಕೆಯ ಚಿಹ್ನೆ ಕೇಳಲು ಹೋದಾಗ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಹಿ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ಚಿಕ್ಕರೂಗಿ ಗ್ರಾಪಂ ಎದುರು ಶನಿವಾರ ರಾತ್ರಿಯಿಡಿ ಧರಣಿ ಕುಳಿತು ಪ್ರತಿಭಟಿಸಿದ್ದಾರೆ. ಎರಡನೇ ಹಂತದಲ್ಲಿ ನಡೆಯುವ ಗ್ರಾಪಂಗಳ ಚುನಾವಣೆಗೆ ಶನಿವಾರ ನಾಮಪತ್ರ ವಾಪಸ್ ಪಡೆಯುವ ಹಾಗೂ ಅಭ್ಯರ್ಥಿಗಳಿಗೆ ಚಿಹ್ನೆ ನೀಡುವ ದಿನವಾಗಿತ್ತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಚಿಹ್ನೆ ತರಲು ಚುನಾವಣೆ ಅಧಿಕಾರಿಗಳಿಗೆ ಭೇಟಿ ಮಾಡಲು ಹೋದಾಗ ಚುನಾವಣಾಧಿಕಾರಿ ಹಾಗೂ ಕಂಪ್ಯೂಟರ್ ಸಿಬ್ಬಂದಿ ನಾಮಪತ್ರ ಹಿಂಪಡೆಯುವ ಅರ್ಜಿಗೆ ಸಹಿ ಪಡೆದು 100 ರೂ. ಕೊಟ್ಟು ಕಳಿಸಿದ್ದಾರೆ ಎಂದು ಅಭ್ಯರ್ಥಿ ನಾಗಮ್ಮ ಸಂಗನಗೌಡ ಬಿರಾದಾರ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net