

ನಾಪೋಕ್ಲು: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಆಚರಣೆಗೆ ಮುಸ್ಲಿಮರು ಭರದ ಸಿದ್ಧತೆ ನಡೆಸಿದ್ದಾರೆ.
ನಾಪೋಕ್ಲು ವ್ಯಾಪ್ತಿಯ ವಿವಿಧ ಮಸೀದಿಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರಗುತ್ತಿದ್ದು, ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಅಲಂಕೃತ ಕಟ್ಟಡಗಳು, ರಸ್ತೆಗಳು ಶೋಭಾಯಮಾನವಾಗಿ ಕಂಗೊಳಿಸುತ್ತಿವೆ. ನಾಪೋಕ್ಲು ಸೇರಿದಂತೆ ವಿವಿಧ ಜಮಾಯತಿಗೆ ಒಳಪಟ್ಟ ಮಸೀದಿ, ದರ್ಗಾ, ಮದರಸಾಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ನಾಪೋಕ್ಲು ಪಟ್ಟಣದ ಮೋಹಿದೀನ್ ಜುಮ್ಮಾ ಮಸೀದಿ, ಹಳೆ ತಾಲೂಕಿನ ಜುಮ್ಮಾ ಮಸೀದಿ, ಚೆರಿಯ ಪರಂಬು, ಕೊಟ್ಟ ಮುಡಿ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ಪಡಿಯನಿ, ಎಡಪಾಲ ಅಯ್ಯಂಗೇರಿ ಸೇರಿದಂತೆ ವಿವಿಧೆಡೆ ಮಸೀದಿಗಳು ಕಂಗೊಳಿಸುತ್ತಿವೆ. ಮಸೀದಿ, ದರ್ಗಾಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ದಪ್ಪು ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.