ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಚಾಲನೆ

Datta maalaa dhaarane
Published on

ಚಿಕ್ಕಮಗಳೂರು: ನಗರದ ಬಸವನಹಳ್ಳಿ ಶಂಕರಮಠದಲ್ಲಿ ಭಾನುವಾರ ಬೆಳಗ್ಗೆ ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ದೊರಕಿದ್ದು, 25ಕ್ಕೂ ಹೆಚ್ಚು ಕಾರ್ಯಕರ್ತರು ದತ್ತಮಾಲೆ ಧರಿಸಿದರು.

ದತ್ತಾತ್ರೇಯರ ಭಾವಚಿತ್ರಕ್ಕೆ ಶಂಕರಮಠದ ಧರ್ಮಾಧಿಕಾರಿ ಚನ್ನಕೇಶವ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಮಾಲಾಧಾರಣೆ ಮಾಡಲಾಯಿತು. ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾ ಪ್ರಮುಖ್ ಪ್ರೀತೇಶ್, ಜಿಲ್ಲಾ ಉಪಾಧ್ಯಕ್ಷ ದಿಲೀಪ್‍ಶೆಟ್ಟಿ, ತಾಲೂಕು ಅಧ್ಯಕ್ಷ ಪುನೀತ್ ಮತ್ತಿತರ 25ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಧರ್ಮಾಧಿಕಾರಿಗಳು ಮಾಲಾಧಾರಣೆ ಮಾಡಿಸಿದರು.

ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ಕರೊನಾ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಈ ಬಾರಿ ಶೋಭಾಯಾತ್ರೆ ಹಾಗೂ ಧರ್ಮಸಭೆಯನ್ನು ಕೈಬಿಡಲಾಗಿದೆ. ದತ್ತಪೀಠಕ್ಕೆ ಭೇಟಿ ನೀಡುವ ಮಾಲಾಧಾರಿಗಳ ಸಂಖ್ಯೆ ಸಹ ಈ ಬಾರಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

ದತ್ತ ದೀಪೋತ್ಸವ: ನ.23 ರಂದು ರಾಜ್ಯಾದ್ಯಂತ ದೇವಾಲಯಗಳಲ್ಲಿ ದತ್ತ ದೀಪೋತ್ಸವ ನಡೆಯಲಿದ್ದು ಕಾರ್ಯಕರ್ತರು ದೀಪಗಳನ್ನು ಹಚ್ಚಿ ದತ್ತಪೀಠದ ವಿಮೋಚನೆಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕೆಂದು ನ.24 ರಂದು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಯಲಿದ್ದು, ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು. 25 ರಂದು ನಗರದಲ್ಲಿ ಮಾಲಾಧಾರಿಗಳು ಭಿಕ್ಷಾಟಣೆ ನಡೆಸಿ ಪಡಿ ಸಂಗ್ರಹಿಸಲಿದ್ದಾರೆ. ಸಂಗ್ರಹಿಸಿದ ಪಡಿಯನ್ನು ಈ ಬಾರಿ ನೆರೆ ಹಾಗೂ ಕರೊನಾ ಸಂತ್ರಸ್ತರಿಗೆ ವಿತರಿಸಲಾಗುತ್ತದೆ ಎಂದು ಹೇಳಿದರು.

ನ.26 ರಂದು ಪ್ರಮುಖರು ಭಾಗಿ
ನ.26 ರಂದು ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಜೇವರ್ಗಿಮಠ ಶ್ರೀ ಸಿದ್ದಲಿಂಗಸ್ವಾಮೀಜಿ, ಕಾಳಿಮಠದ ಶ್ರೀ ಋಷಿಕುಮಾರ ಸ್ವಾಮೀಜಿ ಸೇರಿ ಜಿಲ್ಲೆಯ 300 ರಿಂದ 500 ಪ್ರಮುಖರು ಮಾತ್ರ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪೀಠದ ಆವರಣದಲ್ಲಿ ಸಾಧುಸಂತರ ಸಮ್ಮುಖದಲ್ಲಿ ಹೋಮ, ಹವನಾದಿಗಳು ನೆರವೇರಲಿದ್ದು, ಸಮಾರೋಪ ಸಮಾರಂಭದಲ್ಲಿ ಸಾಧು ಸಂತರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

=-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net