

ಅವಿನಾಶ್ ಜೈನಹಳ್ಳಿ ಮೈಸೂರು
ರಾಜ್ಯದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ. ಸತತ ಎರಡು ವರ್ಷಗಳ ನಂತರ ದಸರಾ ಮಹೋತ್ಸವದಲ್ಲಿ ಮತ್ತೆ ‘ದಸರಾ ಕ್ರೀಡಾಕೂಟ’ ಆಯೋಜನೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು, ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ. 26ರಿಂದ ಅ.2 ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ.
ಈ ಸಂಬಂಧ ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು, ರಾಜ್ಯದ ಎಲ್ಲ ಜಿಲ್ಲೆಯ ಸಹಾಯಕ ನಿರ್ದೇಶಕರು/ಉಪ ನಿರ್ದೇಶಕರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಈ ಬಾರಿ ಒಟ್ಟು 35ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ.
ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ಎಲ್ಲ ಕ್ರೀಡಾಕೂಟಗಳನ್ನು ಸೆ. 10ರೊಳಗೆ ಮುಗಿಸುವಂತೆ ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ. ಈ ಬಾರಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಆಯಾಯಾ ಜಿಲ್ಲಾ ಪಂಚಾಯಿತಿಗಳಿಂದ ಅನುದಾನ ನೀಡಲಾಗುತ್ತಿದೆ. ಇನ್ನು ಪ್ರತಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಕ್ರೀಡಾ ಇಲಾಖೆ ಹಣ ನೀಡಲಿದೆ.
ಪ್ರತಿ ವಿಭಾಗಕ್ಕೆ ತಲಾ 7 ಅಥವಾ 8 ಜಿಲ್ಲೆಗಳನ್ನು ಸೇರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಹಾಸನ, ಚಾಮರಾಜ ನಗರ, ಮಂಡ್ಯ, ಮೈಸೂರು ಜಿಲ್ಲೆಗಳನ್ನು ಸೇರಿಸಲಾಗಿದೆ. ಬೆಂಗಳೂರು ನಗರ ವಿಭಾಗ ಬೆಂಗಳೂರು ನಗರ ಜಿಲ್ಲೆ ಮಾತ್ರ ಸೇರಿಸಲಾಗಿದೆ.
ಈ ಬಾರಿಯ ಸ್ಪರ್ಧೆಗಳ ವಿವರ:
ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರಿಗೆ ಜಿಮ್ನಾಸ್ಟಿಕ್, ವಾಲಿಬಾಲ್, ಕಬಡ್ಡಿ, ಖೋ-ಖೋ, ಷಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನಿಸ್, ಟೆನಿಸ್, ಫುಟ್ಬಾಲ್, ಬ್ಯಾಡ್ಮಿಂಟನ್, ಹಾಕಿ ಪಂದ್ಯಾವಳಿ, ಅಥ್ಲೆಟಿಕ್ಸ್‌ನಲ್ಲಿ 100, 200, 400, 800, 1,500, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 4100 ಮೀ ಹಾಗೂ 4400 ಮೀ ರಿಲೇ ಸ್ಪರ್ಧೆಗಳ ನಡೆಯಲಿವೆ. ಜತೆಗೆ ಪುರುಷರಿಗೆ 5,000 ಮೀ.ಓಟ, 110 ಮೀ. ಹರ್ಡಲ್ಸ್ ನಡೆಯಲಿದೆ. ಮಹಿಳೆಯರಿಗೆ 3,000 ಮೀ. ಓಟ, 100 ಮೀ. ಹರ್ಡಲ್ಸ್ ಓಟ ನಡೆಯಲಿದೆ.
ಈಜು ಸ್ಪರ್ಧೆ: 100, 200, 400 ಮೀ. ಫ್ರೀ ಸ್ಟೈಲ್, 100, 200 ಮೀ. ಬ್ಯಾಕ್ ಸ್ಟ್ರೋಕ್, 100 ಮೀ. ಬಟರ್ ಫ್ಲೈ, 100,200 ಮೀ.ಬ್ರೆಸ್ಟ್ ಸ್ಟ್ರೋಕ್, 200 ಮೀ. ಇಂಡುವಿಜಲ್ ಮಿಡ್ಲೆ, 4*100 ಮೀ. ಫ್ರೀ ಸ್ಟೈಲ್ ರಿಲೇ ಇರುತ್ತದೆ. ಮೇಲಿನ ಇಷ್ಟು ಸ್ಪರ್ಧೆಗಳು ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ನಡೆಯಲಿವೆ.
ಸೈಕ್ಲೋಥಾನ್, ದೇಹದಾರ್ಢ್ಯ: ದೇಹದಾರ್ಢ್ಯ, ಸೈಕ್ಲೋಥಾನ್ ಹಾಗೂ ಮ್ಯಾರಾಥಾನ್ ಸ್ಪರ್ಧೆ ತಾಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದಲ್ಲಿ ನಡೆಯುವುದಿಲ್ಲ. ಬದಲಾಗಿ ಮೈಸೂರಿನಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರಥಮ ಬಹುಮಾನ 8 ಸಾವಿರ ರೂ.
ಕ್ರೀಡಾಕೂಟದ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುತ್ತದೆ. ಕ್ರೀಡಾಕೂಟದ ವೈಯಕ್ತಿಕ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ 8 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 5 ಸಾವಿರ ರೂ., ತೃತೀಯ ಸ್ಥಾನಕ್ಕೆ 2.5 ಸಾವಿರ ರೂ. ಹಾಗೂ ಗುಂಪು ಕ್ರೀಡೆಯಲ್ಲಿ (ಒಬ್ಬರಿಗೆ) ಪ್ರಥಮ ಸ್ಥಾನಕ್ಕೆ 2 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 1.5 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 1 ಸಾವಿರ ರೂ. ನಗದು ಬಹುಮಾನ ನೀಡಲು ನಿಗದಿ ಮಾಡಲಾಗಿದ್ದು, ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಇಲಾಖೆ ಆಯುಕ್ತರ ಕಚೇರಿಯಿಂದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಆಯೋಜನೆಗೆ ಸುತ್ತೋಲೆ ಕಳಿಸಿದ್ದಾರೆ. ಈ ಸಂಬಂಧ ಸಭೆ ನಡೆಸಿ ತಾಲೂಕು ಮತ್ತು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ. ಸೆ. 10 ರೊಳಗೆ ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ಎಲ್ಲ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ನಂಜರಾಜ ಬಹದ್ದೂರ್ ಛತ್ರ ಸೇರಿದಂತೆ ನಗರದ ನಾನಾ ಕಡೆ ತಂಗಲು ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ಇಲಾಖೆಯ ಉಪ ನಿರ್ದೇಶಕ ಹಾಗೂ ಕ್ರೀಡಾ ಉಪ ಸಮಿತಿ ಕಾರ್ಯದರ್ಶಿ ಕೆ.ಸುರೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು, ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ.26 ರಿಂದ ಅ. 2ರವರೆಗೆ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ಆಯುಕ್ತರು, ರಾಜ್ಯದ ಎಲ್ಲ ಜಿಲ್ಲೆಯ ಸಹಾಯಕ ನಿರ್ದೇಶಕರು/ಉಪ ನಿರ್ದೇಶಕರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಕ್ರೀಡಾಕೂಟಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕೆ.ಸುರೇಶ್ ಕ್ರೀಡಾ ಉಪ ಸಮಿತಿ ಕಾರ್ಯದರ್ಶಿ