ದಸರಾ ಚಲನಚಿತ್ರೋತ್ಸವಕ್ಕೆ ಸಿದ್ಧತೆ

cinema
Published on

ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವ ಸಂದರ್ಭದಲ್ಲಿ ಸಿನಿಮಾ ಪ್ರಿಯರನ್ನು ರಂಜಿಸುವ ಸಲುವಾಗಿ ದಸರಾ ಚಲನಚಿತ್ರ ಉಪ ಸಮಿತಿ ವತಿಯಿ ಂದ ಒಂದು ವಾರ ಚಲನಚಿತ್ರೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಒಂದೇ ಕಡೆ ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಜನರಿಗೆ ದೊರೆಯಲಿದೆ.

ನಗರದ ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಅ.4 ರಿಂದ 10ರವರೆಗೆ ಮೂರು ಸ್ಕ್ರೀನ್‌ಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಅತ್ಯುತ್ತಮ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಒಂದೆರಡು ದಿನಗಳಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಸಿನಿಮಾಗಳು, ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಜನರು ಅವರ ಅಭಿರುಚಿತೆಗೆ ತಕ್ಕ ಹಲವು ಸಿನಿಮಾಗಳನ್ನು ವೀಕ್ಷಿಸಲು ದಸರಾ ಚಲನಚಿತ್ರ ಉಪ ಸಮಿತಿ ಅವಕಾಶ ಮಾಡಿಕೊಡಲಿದೆ.

ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ಬಾರಿಯೂ ಸಹ ಉತ್ತಮ ಸಂ್ಪದನೆ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಎಂದಿನಂತೆ ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರುಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಲು ಸಿನಿಮಾ ನಟರುಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದ್ದು, ಯಾರನ್ನು ಅತಿಥಿಯಾಗಿ ಆಹ್ವಾನಿಸಬೇಕು ಎಂದು ಇನ್ನೂ ನಿರ್ಧಾರವಾಗಿಲ್ಲ.

ಕಳೆದ ಬಾರಿಯ ಚಲನಚಿತ್ರೋತ್ಸವ ವೀಕ್ಷಣೆಗೆ 500 ರೂ.ಮೊತ್ತದ ಪಾಸ್ ನೀಡಲಾಗಿತ್ತು. ಈ ಬಾರಿ ಪಾಸ್ ದರ ಇನ್ನೂ ನಿರ್ಧಾರ ವಾಗಿಲ್ಲ. ದರ ನಿಗದಿಯಾದ ನಂತರ ಜನರು ಆನ್‌ಲೈನ್ ಮೂಲಕ ಪಾಸ್‌ಗಳನ್ನು ಪಡೆದುಕೊಳ್ಳಬಹುದು. ದಸರಾ ಚಲನಚಿತ್ರ ಉಪ ಸಮಿತಿ ಆನ್‌ಲೈನ್ ಲಿಂಕ್ ಅನ್ನು ಮಾಧ್ಯಮದ ಮೂಲಕ ಬಿಡುಗಡೆ ಮಾಡಲಿದೆ. 7 ದಿನದ ಪಾಸ್ ಪಡೆಯಲು ಆಸಕ್ತಿ ಹೊಂದಿಲ್ಲದೆ ಇರುವವರು ದಿನದ ಪಾಸ್‌ಅನ್ನು ಸಹ ಪಡೆದುಕೊಳ್ಳಬಹುದು. ಈ ದಿನದ ಪಾಸ್‌ಅನ್ನು ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿಯೇ ದೊರೆಯಲಿದೆ.

2022ರಲ್ಲಿ ನಟ ದಿ. ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಸಿನಿಮಾಗಳನ್ನು ಹೆಚ್ಚಾಗಿ ಪ್ರದರ್ಶಿಸಲಾಯಿತು. 2023ರಲ್ಲಿ ಹಾಸ್ಯನಟ ನರಸಿಂಹರಾಜು ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಅವರ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಬಾರಿ ಯಾವ ಥೀಮ್ ಅಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂಬ ಕುತೂಹಲ ಇದೆ.

ಕಿರುಚಿತ್ರಗಳ ಪ್ರದರ್ಶನ: ಕಿರುಚಿತ್ರಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಬಾರಿಯೂ ಕಿರುಚಿತ್ರಗಳ ಸ್ಪರ್ಧೆ ಆಯೋಜಿಸಿದ್ದು, ಅತ್ಯುತ್ತಮ 20 ಕಿರುಚಿತ್ರಗಳನ್ನು ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಕಿರುಚಿತ್ರದ ಅವಧಿಯು ಶೀರ್ಷಿಕೆ ಒಳಗೊಂಡೊಂತೆ 10 ರಿಂದ 15 ನಿಮಿಷಗಳ ಒಳಗೆ ಇರಬೇಕು. ಕಿರುಚಿತ್ರ ಯಾವುದೇ ಆನ್‌ಲೈನ್ ಮೀಡಿಯಾದಲ್ಲಿ ಬಿಡುಗಡೆಯಾಗಿರಬಾರದು. ಕಿರುಚಿತ್ರ 1-11-2-2023 ರಿಂದ 12-9-2024ರ ಅವಧಿಯೊಳಗೆ ನಿರ್ಮಾಣವಾಗಿರಬೇಕು. ಇಂತಹ ಚಿತ್ರಗಳನ್ನು ಮಾತ್ರ ಸ್ವೀಕರಿಸಿ ಅತ್ಯುತ್ತಮ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು. ಅರ್ಜಿ ಸಲ್ಲಿಸಲು ಸೆ.15ರವರೆಗೆ ಕಾಲಾವಕಾಶವಿದ್ದು, ಇದುವರೆಗೆ ಒಟ್ಟು 30 ಅರ್ಜಿಗಳು ಸ್ವೀಕೃತವಾಗಿದೆ.

ಯಾವುದೇ ಭಾಷೆಯ ಕಿರುಚಿತ್ರವನ್ನಾದರೂ ಸ್ಪರ್ಧೆಗೆ ಸಲ್ಲಿಸಬಹುದು. ಸ್ಪರ್ಧೆಗೆ ಭಾಗವಹಿಸುವ ಎಲ್ಲ ಕಿರುಚಿತ್ರಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಕಿರುಚಿತ್ರಗಳಿಗೆ ಉಪಶೀರ್ಷಿಕೆಗಳು ಕಡ್ಡಾಯ. ಅತ್ಯುತ್ತಮ ಕಿರುಚಿತ್ರಕ್ಕೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಗುವುದು. ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಅರ್ಜಿಯ ಲಿಂಕ್ ಪಡೆಯಬಹುದು. ಮಾಹಿತಿಗೆ ಮೊ: 7892543852 ಸಂಪರ್ಕಿಸಬಹುದು.

ದಸರಾ ಚಲಚಿತ್ರೋತ್ಸವ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಅತ್ಯುತ್ತಮವಾಗಿ ಆಯೋಜಿಸಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತಿದೆ. ಈ ಬಾರಿ ನಗರದ ಐನಾಕ್ಸ್ ಚಿತ್ರಮಂದಿರದ ಮೂರು ಸ್ಕ್ರೀನ್‌ಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಿನಿಮಾಗಳು ಹಾಗೂ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ಅತ್ಯುತ್ತಮ 20 ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಿನಿಮಾ ಆಸಕ್ತರು ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಲನಚಿತ್ರೋತ್ಸವವನ್ನು ಯಶಸ್ವಿಗೊಳಿಸಬೇಕು.
ಟಿ.ಕೆ. ಹರೀಶ್,
ಕಾರ್ಯದರ್ಶಿ, ದಸರಾ ಚಲನಚಿತ್ರೋತ್ಸವ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net