

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ರಾಜಮನೆತನದಿಂದ ಶರನ್ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಕ್ಕೆ ಅ. 17ರಿಂದ ಚಾಲನೆ ದೊರೆಯಲಿದೆ. ಪ್ರತಿವರ್ಷದಂತೆ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಲಿವೆ. ಕೋವಿಡ್ ಕಾರಣ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೂ ಈ ಬಾರಿ ಪ್ರವೇಶ ನಿರ್ಬಂಧಿಸಲಾಗಿದೆ. ದಸರಾ ಪ್ರಯುಕ್ತ ಅರಮನೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಲು ಅಗತ್ಯ ತಯಾರಿಗಳು ನಡೆಯುತ್ತಿವೆ.
ಈಗಾಗಲೇ ಸಿಂಹಾಸನದ ಬಿಡಿ ಭಾಗಗಳನ್ನು ಜೋಡಣೆ ಮಾಡಿದ್ದು, ಅ. 17ರಂದು ಬೆಳಗ್ಗೆ 6.15ರಿಂದ 6.30ರವರೆಗೆ ರತ್ನ ಖಚಿತ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನಡೆಯಲಿದೆ. ಅಂದು ಬೆಳಗ್ಗೆ 7.45ರಿಂದ 8.15ರವರೆಗೆ ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನಡೆಯಲಿದ್ದು, ಬೆಳಗ್ಗೆ 10ಕ್ಕೆ ಪಟ್ಟದ ಆನೆ, ಕುದುರೆ ಮತ್ತು ಪಟ್ಟದ ಹಸುವನ್ನು ಸವಾರ ತೊಟ್ಟಿಗೆ ಕರೆತಂದು ಕಳಸ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ.
ಅ.21ರಂದು ಬೆಳಗ್ಗೆ 9.45ಕ್ಕೆ ಸರಸ್ವತಿ ಪೂಜೆ, 23ರಂದು ಬೆಳಗ್ಗೆ 9.45ಕ್ಕೆ ಕನ್ನಡಿ ತೊಟ್ಟಿಯಲ್ಲಿ ಕಲಾರತಿ ಜರುಗಲಿದ್ದು, ಸಂಜೆ ಯದುವೀರ ಖಾಸಗಿ ದರ್ಬಾರ್ ನಡೆಸುತ್ತಾರೆ. 25ರಂದು ಪಟ್ಟದ ಆನೆ, ಕುದುರೆ ಮತ್ತು ಹಸು ಆನೆಬಾಗಿಲಿಗೆ ಬೆಳಗ್ಗೆ 6 ಗಂಟೆಗೆ ಬರಲಿದ್ದು, ಬೆಳಗ್ಗೆ 6.15ಕ್ಕೆ ಚಂಡಿ ಹೋಮ ನಡೆಯುತ್ತದೆ. ಬೆಳಗ್ಗೆ 6.28ಕ್ಕೆ ಆನೆ ಬಾಗಿಲಿನಿಂದ ಖಾಸಾ ಆಯುಧಗಳನ್ನು ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ತರಲಾಗುವುದು. ಪೂಜೆ ನಂತರ ಕಲ್ಯಾಣ ಮಂಟಪಕ್ಕೆ ತರಲಾಗುವುದು. ಬೆಳಗ್ಗೆ 10 ಗಂಟೆಗೆ ಆಯುಧ ಪೂಜೆ ನಡೆಯಲಿದ್ದು, ಅಂದು ಸಹ ಸಂಜೆ ಖಾಸಗಿ ದರ್ಬಾರ್ ನಡೆಯುತ್ತದೆ.
26ರ ವಿಜಯದಶಮಿ ದಿನದಂದು ಖಾಸಾ ಆಯುಧಗಳಿಗೆ ಉತ್ತರ ಪೂಜೆ ನಡೆಸಿ ನಂತರ ಭುವನೇಶ್ವರಿ ದೇವಸ್ಥಾನಕ್ಕೆ ಕಳುಹಿಸಲಾಗುವುದು. ಈ ಬಾರಿಯ ಸರಳ ಮತ್ತು ಸಾಂಪ್ರದಾಯಿಕ ದಸರಾ ಅರಮನೆಗೆ ಸೀಮಿತವಾಗಿದ್ದು, ಸರಳವಾದರೂ ಅರಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.