ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ

19
Published on

ಮೈಸೂರು: ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಯಾವುದೇ ಆಸ್ಪತ್ರೆಗಳಲ್ಲಿ ಈ ಕೃತ್ಯಗಳು ಜರುಗದಂತೆ ತಮ್ಮ ಕರ್ತವ್ಯ ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಶೈಮಾ ಖಮ್ರೋಜ್ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರಗಳ ಕುರಿತು ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರೂಣದಲ್ಲೇ ಲಿಂಗಪತ್ತೆ ಮಾಡುವುದು ಕಾನೂನುಬಾಹಿರವಾಗಿದ್ದು, ಇದಕ್ಕೆ ಕಾನೂನಿನ ಅಡಿಯಲ್ಲಿ ದಂಡ ಹಾಗೂ ಶಿಕ್ಷೆಗಳಿವೆ. ಪ್ರತಿಯೊಂದು ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂಬ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಕಾಯ್ದೆ ಬಂದ ಮೇಲೆ ಈ ರೀತಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಇದನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಸಿಬ್ಬಂದಿ ಪಾತ್ರ ಮಹತ್ವದ್ದು ಎಂದು ತಿಳಿಸಿದರು.
90ರ ಇಸವಿಯಲ್ಲಿ ಪ್ರತಿಯೊಂದು ಮನೆಯಲ್ಲೂ 8 ರಿಂದ 10 ಮಕ್ಕಳು ಇರುತ್ತಿದ್ದರು. ಗಂಡು ಮಗುವನ್ನು ಪಡೆಯಬೇಕೆಂಬುದೇ ಇದಕ್ಕೆ ಮೂಲ ಕಾರಣವಾಗಿತ್ತು. ಅದಕ್ಕಾಗಿ ಅವರು ಪೂಜೆ, ಹರಕೆ ಸೇರಿದಂತೆ ಮೂಢನಂಬಿಕೆಗಳ ಮೊರೆಯೂ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಗಂಡು ಮಕ್ಕಳಿಗೆ ಮಾತ್ರ ವಿಶೇಷವಾದ ವಿದ್ಯಾಭ್ಯಾಸ ಹಾಗೂ ಸೌಲಭ್ಯಗಳು ಮತ್ತು ಹೆಣ್ಣು ಮಕ್ಕಳು ಇದರಿಂದ ವಂಚಿತರಾಗಿರುತ್ತಿದ್ದರು. ಕಾಲಕ್ರಮೇಣ ಶಿಕ್ಷಣದಿಂದ ಹಾಗೂ ಸಮಾಜದಲ್ಲಿನ ಪ್ರಬುದ್ಧತೆಯಿಂದ ಇಂದಿನ ದಿನಗಳಲ್ಲಿ ಇದರ ಪ್ರಮಾಣ ಕಡಿಮೆಯಾಗಿದೆ ಎಂದರು.

ಮಾನವನ ಎಲ್ಲ ಹೊಸ ಸಂಶೋಧನೆಗಳು ಸದ್ಬಳಕೆಗಾಗಿ ಆವಿಷ್ಕಾರಗೊಂಡಿದ್ದರೂ ಸಹ ಅವುಗಳನ್ನು ನಕಾರಾತ್ಮಕವಾಗಿ ಬಳಸುವುದು ತಪ್ಪಲಿಲ್ಲ. ಗ್ಯಾಸ್ ಅನ್ವೇಷಣೆಯು ಒಂದಷ್ಟು ಡೌರಿ ಡೆತ್‌ಗಳಿಗೆ ಕಾರಣವಾದರೆ, ದೂರದರ್ಶನದಂಥ ಆವಿಷ್ಕಾರಗಳು ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿವೆ. ಇವುಗಳು ಮಾನವನ ಆರೋಗ್ಯ ಸಂಬಂಧ ಶಿಕ್ಷಣ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತಿವೆ. ಹಾಗೆಯೇ ಸ್ಕ್ಯಾನಿಂಗ್ ಉಪಕರಣದ ಅನ್ವೇಷಣೆಯೂ ಮಗುವಿನ ಆರೋಗ್ಯ ಹಾಗೂ ಹಾರೈಕೆ ದೃಷ್ಟಿಯಿಂದ ಪರಿಚಯಿಸಲ್ಪಟ್ಟಿತು. ಅದನ್ನು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುವಂತೆ ಬಳಸಲಾಗುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಸಂದರ್ಭದಲ್ಲಿ ಮಗುವಿನ ಲಿಂಗ ಸೂಚಿಸುವಂತೆ ಮಾತನಾಡುವುದು, ಸನ್ನೆ ಮಾಡುವುದು ಅಥವಾ ಮಗುವಿನ ಲಿಂಗವನ್ನು ಪರೋಕ್ಷವಾಗಿ ಬಿಂಬಿಸುವಂತೆ ಸಿಹಿ, ಹಬ್ಬ, ಆಚರಣೆಗಳ ಹೆಸರಿನಲ್ಲಿ ಮಾತನಾಡುವುದು ಕೂಡ ಅಪರಾಧ. ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ. ನಿಮ್ಮ ನಿಮ್ಮ ಆತ್ಮಸಾಕ್ಷಿಗೆ ನೀವು ಹೆದರಬೇಕು. ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವುದರಿಂದ ಯಾರಿಗೂ ಉತ್ತರಿಸಲು ಹೆದರುವ ಪರಿಸ್ಥಿತಿ ಬರುವುದಿಲ್ಲ. ಕಾನೂನಾತ್ಮಕವಾಗಿ ನೋಂದಾಯಿಸಿದ ಸ್ಕ್ಯಾನಿಂಗ್ ಉಪಕರಣಗಳನ್ನು ಬಳಸಿ. ಪ್ರತಿಯೊಂದಕ್ಕೂ ದಾಖಲೆಗಳನ್ನು ನಿರ್ವಹಿಸಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಮರನಾಥ್, ಕಾರ್ಯಕ್ರಮ ಅನುಷ್ಠಾಧಿಕಾರಿ ಡಾ. ಗೋಪಿನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net