

ಸುಭಾಸ ಧೂಪದಹೊಂಡ ಕಾರವಾರ
ಅನಾವೃಷ್ಟಿಯ ಪರಿಣಾಮ ತಾಲೂಕಿನ ಕೆಲ ಭಾಗಗಳಲ್ಲಿ ಈ ವರ್ಷ ಈಗಾಗಲೇ ಉಪ್ಪು ನೀರಿನ ಹಾವಳಿ ಪ್ರಾರಂಭವಾಗಿದೆ. ಕಾಳಿ ನದಿ ಹಿನ್ನೀರಿನ ಪ್ರದೇಶದ ಹಣಕೋಣ ಗ್ರಾಪಂ ವ್ಯಾಪ್ತಿಯ ಬಾವಿಗಳು ಈಗಾಗಲೇ ಉಪ್ಪಾಗಿದ್ದು, ಜನ ನೀರಿಗಾಗಿ ತೊಂದರೆಪಡುವಂತಾಗಿದೆ.
ಕಾರವಾರದಲ್ಲಿ ಕಾಳಿ ಸಂಗಮ ಪ್ರದೇಶದಿಂದ ಹಿಂದೆ ನದಿಯಲ್ಲಿ ಸುಮಾರು 25 ಕಿಮೀವರೆಗೂ ಸಮುದ್ರದ ಉಬ್ಬರದ ಸಮಯದಲ್ಲಿ ಉಪ್ಪು ನೀರು ನುಗ್ಗುತ್ತದೆ. ನದಿ ಹರಿವಿನ ವ್ಯಾಪ್ತಿ ಮಾತ್ರವಲ್ಲದೆ, ಹಿನ್ನೀರಿನ ಜಗನಿ ಪ್ರದೇಶಗಳಿಗೆ, ಸಣ್ಣ ತೊರೆಗಳ ಜಲವೂ ಉಪ್ಪಾಗುವುದು ಸಾಮಾನ್ಯ ಪ್ರಕ್ರಿಯೆ.
ಈ ಪ್ರಕ್ರಿಯೆಯ ಪರಿಣಾಮ ಇಲ್ಲಿನ ಚಿತ್ತಾಕುಲಾ, ಅಸ್ನೋಟಿ, ಹಣಕೋಣ, ಘಾಡಸಾಯಿ, ಕಡವಾಡ, ಕಿನ್ನರ, ವೈಲವಾಡ ಮುಂತಾದ ಗ್ರಾಪಂ ವ್ಯಾಪ್ತಿಯ ಕೆಲವು ಜಮೀನು ಕೃಷಿ ಮಾಡಲು ಬಾರದಂತಾಗುವುದು, ಬಾವಿಗಳ ನೀರು ಕುಡಿಯಲು ಬಾರದಂತಾಗುವ ಸಮಸ್ಯೆ ಹಿಂದಿನಿಂದಲೂ ಇದೆ.
ಮಳೆಗಾಲದಲ್ಲಿ ಬೆಟ್ಟದ ಮೇಲಿನಿಂದ ಬರುವ ಸಿಹಿ ನೀರಿನ ಹರಿವು ಜೋರಾಗಿರುವುದರಿಂದ ಈ ಉಪ್ಪು ನೀರಿನ ಪ್ರಭಾವ ಕಡಿಮೆಯಾಗುತ್ತಿತ್ತು. ಇದರಿಂದ ಜೂನ್‌ನಿಂದ ಸುಮಾರು ಡಿಸೆಂಬರ್ ಅಥವಾ ಕೆಲವರ್ಷ ಜನವರಿವರೆಗೂ ಜನರಿಗೆ ಉಪ್ಪು ನೀರಿನ ಸಮಸ್ಯೆ ಕಡಿಮೆಯಾಗಿತ್ತು. ಬಾವಿಗಳಲ್ಲಿ ಸಿಹಿ ನೀರು ಸಿಗುತ್ತಿತ್ತು. ಆದರೆ, ಈ ಬಾರಿ ಮಳೆ ಇಲ್ಲ. ಬೆಟ್ಟದ ಮೇಲಿನಿಂದ ಜುಳು ಜುಳು ಎಂದು ಹರಿಯುವ ತೊರೆಗಳ ಅಬ್ಬರವಿಲ್ಲ. ಇದರಿಂದ ಆಗಸ್ಟ್ ಕೊನೆಗೇ ಬಾವಿಗಳ ನೀರು ಉಪ್ಪಾಗಲಾರಂಭಿಸಿದೆ.
ಕಾಳಿ ಎಡದಂಡೆಯ ಗ್ರಾಮಗಳಿಗೆ ನದಿಯಿಂದ ನೀರೆತ್ತಿ ಕುಡಿಯಲು ಪೂರೈಸುವ ಕೆರವಡಿ ಬಹು ಗ್ರಾಮ ಯೋಜನೆಯಲ್ಲಿ ಕಳೆದ ವರ್ಷ ಬೇಸಿಗೆಯಲ್ಲಿ ಉಪ್ಪು ನೀರು ಕಾಣಿಸಿಕೊಂಡಿತ್ತು. ಕಾಳಿ ಬಲದಂಡೆಯ ಗ್ರಾಮಗಳಿಗೆ ನೀರು ಪೂರೈಸುವ ಗೋಟೆಗಾಳಿ ಬಹುಗ್ರಾಮ ಯೋಜನೆಗೂ ಎರಡು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು. ಈ ಬಾರಿ ಅವಧಿಗೂ ಮುಂಚೆ ಉಪ್ಪು ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ ಎನ್ನುತ್ತಾರೆ ಅಧಿಕಾರಿಗಳು.
ಹಣಕೋಣ ಗ್ರಾಪಂ ವ್ಯಾಪ್ತಿಯ ಅಂಬಿವಾಡ, ಬಾಬುನಾಯ್ಕವಾಡ, ಪಾಟ್ಲೋವಾಡ, ಮುಂತಾದೆಡೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಅಂಬಿವಾಡದ 7 ಬಾವಿಗಳು ಈಗಾಗಲೇ ಉಪ್ಪು ನೀರಿನಿಂದ ಹಾಳಾಗಿವೆ. ಇಲ್ಲಿನ ಮನೆಗಳಿಗೆ ಜಲಜೀವನ ಮಿಷನ್ ಪ್ರಯೋಜನ ತಲುಪಿಲ್ಲ. ಬೇರೆ ಕುಡಿಯುವ ನೀರಿನ ಯೋಜನೆಯೂ ಇಲ್ಲ. ಇದರಿಂದ ಗ್ರಾಮಸ್ಥರು ನೀರಿಗಾಗಿ ದೂರದವರೆಗೆ ಕೊಡ ಹೊತ್ತು ಓಡಾಡುವ ಪರಿಸ್ಥಿತಿ ಈಗಲೇ ಸೃಷ್ಟಿಯಾಗಿದೆ. ಪಕ್ಕದಲ್ಲಿರುವ ಖಾರ್ಲ್ಯಾಂಡ್ ಒಡ್ಡು ಸಮರ್ಪಕವಾಗಿಲ್ಲ. ಗೇಟ್ ಹಾಕಿ ರಿಪೇರಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರು ಪೂರೈಕೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜಗದೀಶ ಗಂಗೇಪುತ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಗಂಗಾವಳಿಯಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಕಾರವಾರ ಹಾಗೂ ಅಂಕೋಲಾ ಪಟ್ಟಣ ಹಾಗೂ ಹಲವು ಗ್ರಾಮಗಳಿಗೆ ಅವಧಿಗಿಂತ ಮುಂಚೆಯೇ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ದೊರೆತಿದೆ.
ಕಾರವಾರ, ಅಂಕೋಲಾ ಪಟ್ಟಣ ಹಾಗೂ 13 ಗ್ರಾಪಂಗಳಿಗೆ ಗಂಗಾವಳಿ ನದಿಯಿಂದ ನೀರು ಪೂರೈಸಲಾಗುತ್ತದೆ. 1975 ರಿಂದ ಅಂಕೋಲಾದ ಹೊನ್ನಳ್ಳಿ ಬಳಿ ನೀರೆತ್ತಿ ಕೊಳವೆ ಮಾರ್ಗದ ಮೂಲಕ ಪೂರೈಸಲಾಗುತ್ತಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಹೊನ್ನಳ್ಳಿ ಬಳಿ 3.5 ಮೀಟರ್‌ನಷ್ಟು ನೀರು ಇರುತ್ತಿತ್ತು. ಆದರೆ, ಈ ವರ್ಷ ನೀರಿನ ಪ್ರಮಾಣ 2.6 ಮೀಟರ್‌ಗೆ ಇಳಿದಿದೆ. ಸೀಬರ್ಡ್ ನೌಕಾ ಯೋಜನೆ, ಗ್ರಾಸಿಂ ಇಂಡಸ್ಟ್ರೀ ಸೇರಿ ಹಲವೆಡೆ ಇದೇ ಯೋಜನೆಯಿಂದ ನೀರು ಪೂರೈಸಲಾಗುತ್ತದೆ. ಪ್ರತಿ ದಿನ 21 ಮಿಲಿಯನ್ ಲೀಟರ್ ನೀರನ್ನು ಎತ್ತಲಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಡಿಸೆಂಬರ್ ಒಳಗೇ ನೀರೆತ್ತುವುದು ಸಮಸ್ಯೆಯಾಗಬಹುದು ಎಂಬುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಅಭಿಪ್ರಾಯ.
ಪ್ರತಿ ವರ್ಷ ೆಬ್ರವರಿ ಹೊತ್ತಿಗೆ ಮರಳಿನ ಚೀಲಗಳನ್ನಿಟ್ಟು ನದಿ ನೀರಿನ ಹರಿವನ್ನು ತಾತ್ಕಾಲಿಕವಾಗಿ ತಡೆದು ನೀರೆತ್ತುವ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಡಿಸೆಂಬರ್‌ಗೂ ಮುಂಚೆಯೇ ನೀರು ಖಾಲಿಯಾಗುವ ಮುನ್ಸೂಚನೆ ಇರುವುದರಿಂದ ನಮ್ಮ ಕೇಂದ್ರ ಕಚೇರಿಗೆ ತಿಳಿಸಿ, ಮರಳಿನ ಚೀಲ ಅಳವಡಿಕೆಗೆ ಶೀಘ್ರ ಟೆಂಡರ್ ಕರೆಯುವ ಪ್ರಯತ್ನ ನಡೆಸಿದ್ದೇವೆ.I ಶಿವರಾಮ ನಾಯ್ಕನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಇಇ…….