ಸನಾತನ ಧರ್ಮ ಉಳಿಸಲು ಹಬ್ಬಗಳಿಂದ ಮುನ್ನುಡಿ

h5-Akash Butti 1
Published on

ಹುಬ್ಬಳ್ಳಿ: ನಮ್ಮ ದೇಶದಲ್ಲಿ ಬರುವ ವಿವಿಧ ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಇಂಥ ಹಬ್ಬಗಳನ್ನು ಆಚರಿಸಿ ಸನಾತನ ಧರ್ಮ ಉಳಿಸಲು ಮುನ್ನಡಿ ಬರೆಯಲಾಗುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ವಿಎಕೆ ಫೌಂಡೇಷನ್, ಸ್ವರ್ಣ ಸಮೂಹ ಸಂಸ್ಥೆಗಳು, ಶ್ರೀದುರ್ಗಾ ಡೆವೆಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಸಹಯೋಗದಲ್ಲಿ ನಗರದ ಮೂರು ಸಾವಿರ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಹುಬ್ಬಳ್ಳಿ ಆಕಾಶ ಬುಟ್ಟಿ ಹಬ್ಬ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಲಗಿ ಹಬ್ಬ, ಗಾಳಿ ಪಟ ಉತ್ಸವ, ಆಕಾಶ ಬುಟ್ಟಿ ಹಬ್ಬ ಹೀಗೆ ತರಹೇವಾರಿ ಹಬ್ಬಗಳನ್ನು ವಿಶಿಷ್ಟವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗುತ್ತಿದೆ. ಇದು ಇತರರಿಗೂ ಮಾದರಿಯಾಗಿದೆ ಎಂದರು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ನಮ್ಮ ಹಬ್ಬಗಳು ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಪ್ರತಿನಿಧಿಸುತ್ತಿವೆ. ದೀಪಗಳನ್ನು ನಾವು ಮನೆ ಮುಂದೆ ಮತ್ತು ದೇವರ ಮುಂದೆ ಹಚ್ಚುತ್ತೇವೆ. ಆಕಾಶ ಬುಟ್ಟಿಯನ್ನು ಆಕಾಶದ ಮೇಲಿರುವ ಎಲ್ಲ ದೇವರಿಗೂ ಸಮರ್ಪಿಸುತ್ತೇವೆ. ಹಾಗಾಗಿ ಆಕಾಶ ಬುಟ್ಟಿ ವಿಶೇಷ ರೂಪದ ಹಬ್ಬವಾಗಿದೆ ಎಂದರು.

ಅನಿತಾ ಜಡಿ ಅವರ ‘ಕಲ್ಪನೆಯ ಕುಸುಮಗಳು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಕುರಿತು ವಿಡಿಯೋ ಮೂಲಕ ಸಂದೇಶ ರವಾನಿಸಿ ಶುಭ ಹಾರೈಸಿದರು.

ಮಾಜಿ ಶಾಸಕ ಅಶೋಕ ಕಾಟವೆ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಆಕಾಶ ಬುಟ್ಟಿ ಹಬ್ಬದ ಸಂಸ್ಥಾಪಕ ಅಧ್ಯಕ್ಷ ರಾಜು ಜರತಾರಘರ, ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ, ಶ್ರೀದುರ್ಗಾ ಡೆವೆಲಪರ್ಸ್ ಆ್ಯಮಡ್ ಪ್ರಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ವೀರೇಶ ಉಂಡಿ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಮುಖರಾದ ನೀಲಕಂಠಸಾ ಜಡಿ, ಭಾಸ್ಕರ ಜಿತೂರ, ಪ್ರಕಾಶ ಬುರಬುರೆ, ಸುನಿತಾ ಬುರಬುರೆ, ಪ್ರೀತಿ ಲದ್ವಾ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net