ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ

22arsph1ep
ಅರಸೀಕೆರೆಯಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹಿರಿಯೂರು ರೇವಣ್ಣ, ಮಧು, ವೀರಭದ್ರಪ್ಪ, ಗೋವಿಂದರಾಜು, ಖಲಂದರ್,ಅಶ್ವತ್ಥ್ ಇತರರು ಭಾಗವಹಿಸಿದ್ದರು.
Published on

ಅರಸೀಕೆರೆ: ನಗರದ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಎಚ್‌ಡಿಎಪ್‌ಸಿ ಬ್ಯಾಂಕ್, ತರಳಬಾಳು ನೌಕರ ಸಂಘ, ಯುವ ವೇದಿಕೆ ಲಯನ್ಸ್ ಕ್ಲಬ್, ಶ್ರೀ ಶಿವಕುಮಾರ ಬಳಗ ಹಾಗೂ ಜಿಲ್ಲಾ ರಕ್ತನಿಧಿ, ಜಿಲ್ಲಾಸ್ಪತ್ರೆ ವತಿಯಿಂದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ತರಳಬಾಳು ವಿದ್ಯಾಸಂಸ್ಥೆಯ ಕೇಂದ್ರ ಸಮಿತಿ ಸದಸ್ಯ ಹಿರಿಯೂರು ರೇವಣ್ಣ ಮಾತನಾಡಿ, ಗುರುಗಳ ಸ್ಮರಣೆ ನಿಮಿತ್ತ ಪ್ರತಿವರ್ಷ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಹಾಗೂ ಗುಂಪು ರಕ್ತ ಪರೀಕ್ಷೆ ಆಯೋಜಿಸುತ್ತಿರುವುದು ಶ್ಲಾಘನೀಯ. ಇಂತಹ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳು ಹಾಗೂ ರಕ್ತದಾನಿಗಳಿಗೆ ಋಣಿಯಾಗಿದ್ದೇವೆ. ತರಳಬಾಳು ಶ್ರೀಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಲಾ, ಕಾಲೇಜುಗಳನ್ನು ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ತಾಲೂಕು ರೆಡ್‌ಕ್ರಾಸ್ ಚೇರ‌್ಮನ್ ಫಿಸಿಯೋ ಮಧು ಮಾತನಾಡಿ, ನಿಯಮಿತವಾಗಿ ರಕ್ತದಾನ ಮಾಡುವುರಿಂದ ಆರೋಗ್ಯ ವೃದ್ಧಿಯಾಗಲಿದೆ. ಅನಗತ್ಯ ಆತಂಕ ಹಾಗೂ ಗಾಳಿ ಸುದ್ದಿಗೆ ಅವಕಾಶ ನೀಡದೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಸೆ.24ರಂದು ಮಂಗಳವಾರ ಸಿರಿಗೆರೆಯಲ್ಲಿ ಹಿರಿಯ ಜಗದ್ಗುರುಗಳ ಸಂಸ್ಮರಣಾ ಕಾರ್ಯಕ್ರಮ ಜರುಗಲಿದ್ದು ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್, ಪ್ರಾಂಶುಪಾಲ ವಸಂತಕುಮಾರ್ ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಯಾದಾಪುರ ವೀರಭದ್ರಪ್ಪ, ನಿರ್ದೇಶಕರಾದ ಶಾಂತಪ್ಪ, ಅಗ್ಗುಂದ ಚಂದ್ರಶೇಖರ್, ಪ್ರಕಾಶ್, ಲಯನ್ಸ್ ಸಂಸ್ಥೆಯ ಗೋವಿಂದರಾಜು, ಗಾಂಧಿ ನೆಹರು, ಪ್ರವೀಣ್ ಪಾಲ್ಗೊಂಡಿದ್ದರು.

ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ರಕ್ತದಾನ ಮಾಡಿದರೆ, ನೂರಾರು ವಿದ್ಯಾರ್ಥಿಗಳು ಗುಂಪು ರಕ್ತ ಪರೀಕ್ಷೆ ಮಾಡಿಸಿದರು. ಎಚ್‌ಡಿಎಪ್‌ಸಿ ಬ್ಯಾಂಕ್ ಉದ್ಯೋಗಿ ಮೊಹಮದ್ ಖಲಂದರ್, ರಕ್ತನಿಧಿ ಹಾಸನ ಘಟಕದ ಅಶ್ವತ್ಥ್ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net