ಪರೀಕ್ಷೆಗೆ ಸಿಸಿ ಕ್ಯಾಮೆರಾ ಕಣ್ಗಾವಲು: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Preliminary meeting on 2nd PUC Exam Mandya
Published on

ಮಂಡ್ಯ: ಜಿಲ್ಲೆಯಲ್ಲಿ ಮಾ.1ರಿಂದ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 ಸಿ.ಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವ ಸಿದ್ಧತೆ ಹಾಗೂ ಪರೀಕ್ಷೆಯ ಸುರಕ್ಷಿತ ಕ್ರಮದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ತಾಲೂಕಿನಲ್ಲಿ 5,073 ವಿದ್ಯಾರ್ಥಿಗಳು, ಮದ್ದೂರಿನಲ್ಲಿ 2,137, ಮಳವಳ್ಳಿಯಲ್ಲಿ 1,063, ಕೆ.ಆರ್.ಪೇಟೆಯಲ್ಲಿ 1,720, ನಾಗಮಂಗಲದಲ್ಲಿ 1,720, ಶ್ರೀರಂಗಪಟ್ಟಣದಲ್ಲಿ 1,108 ಮತ್ತು ಪಾಂಡವಪುರದಲ್ಲಿ 1,717 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿಯಾಗಿದ್ದಾರೆ ಎಂದರು.

ಅಂತೆಯೇ ಮಂಡ್ಯ ತಾಲೂಕಿನಲ್ಲಿ 7, ಮದ್ದೂರಿನಲ್ಲಿ 5, ಮಳವಳ್ಳಿಯಲ್ಲಿ 3, ಕೆ.ಆರ್.ಪೇಟೆಯಲ್ಲಿ 3, ನಾಗಮಂಗಲದಲ್ಲಿ 3, ಶ್ರೀರಂಗಪಟ್ಟಣದಲ್ಲಿ 2 ಮತ್ತು ಪಾಂಡವಪುರ ತಾಲೂಕಿನಲ್ಲಿ 3 ರಂತೆ ಒಟ್ಟು 26 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರ ಇರುವುದಿಲ್ಲ. ಪರೀಕ್ಷಾ ಅಕ್ರಮ ನಡೆಯದಂತೆ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲ ಕೇಂದ್ರದಲ್ಲಿ ಹಾಗೂ ಪರೀಕ್ಷೆ ನಡೆಯುವ ಕೊಠಡಿಯಲ್ಲಿ ಸಿ.ಸಿ ಕ್ಯಾಮೆರಾ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ವೆಬ್‌ಕಾಸ್ಟಿಂಗ್ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಕ್ಷಿಸಲು ಪ್ರಾಂಶುಪಾಲರು ತಂಡವನ್ನು ಸಹ ರಚಿಸಲಾಗಿದೆ ಎಂದು ವಿವರಿಸಿದರು.

ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಕೇಂದ್ರಗಳಲ್ಲಿ ಸಿಟ್ಟಿಂಗ್ ಸ್ಕ್ವಾಡ್ ಹಾಗೂ 5 ಮೊಬೈಲ್ ಸ್ಕ್ವಾಡ್ ತಂಡ ರಚಿಸಲಾಗುವುದು. ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪ್ರಾಂಶುಪಾಲರನ್ನೂಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಕೊಂಡೊಯ್ಯುವ ವಾಹನಕ್ಕೆ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಾಹನಗಳಿಗೆ ಜಿ.ಪಿ.ಎಸ್ ಟ್ರ್ಯಾಕರ್ ಕಡ್ಡಾಯವಾಗಿ ಅಳವಡಿಸಿರಬೇಕು. ಪರೀಕ್ಷೆ ನಡೆಯುವ ದಿನದಂದು ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಅಂದು ನಿಗದಿತ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿ ತೆರೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ, ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಗೃಹ, ಉತ್ತಮ ಸ್ಥಿತಿಯಲ್ಲಿರುವ ಬೆಂಚ್ ವ್ಯವಸ್ಥೆಯಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಆಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ಸಂಬಂಧಪಟ್ಟ ಇಲಾಖೆ ನಿಯೋಜಿಸಬೇಕು. ಕೇಂದ್ರಗಳಿಗೆ ನಿಯೋಜಿಸಲಾಗುವ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಗುರುತಿಸಿ ಚೀಟಿ ಹೊಂದಿರಬೇಕು. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸ್ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವನಾಂದಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net