ಎಲ್ಲರಿಗೂ ನ್ಯಾಯ ಒದಗಿಸುವುದು ಕಾಂಗ್ರೆಸ್​ನ ಸಿದ್ಧಾಂತ

Congress
ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಲೀಂ ಅಹಮ್ಮದ್​ ಮಾತನಾಡಿದರು. ವಿನಯಕುಮಾರ್​ ಸೊರಕೆ, ಅಶೋಕಕುಮಾರ್​ ಕೊಡವೂರು, ಎಂ.ಎ. ಗಫೂರ್​, ಕಿಶನ್​ ಹೆಗ್ಡೆ ಕೊಳ್ಕೆಬೈಲು, ಶಹೀದ್​ ಇತರರಿದ್ದರು.
Published on

ಮುಖ್ಯ ಸಚೇತಕ ಸಲೀಂ ಅಹಮ್ಮದ್​ ಹೇಳಿಕೆ | ವಿಪ ಚುನಾವಣಾ ಪೂರ್ವಭಾವಿ ಸಭೆ

ಉಡುಪಿ: ಅಭಿವೃದ್ಧಿ ಮೂಲಕ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್​ನ ಸಿದ್ಧಾಂತ. ದೇಶದಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಚಲಿತ ಮಾತುಗಳೇ ಇದಕ್ಕೆ ಉದಾಹರಣೆಯಾಗಿದೆ ಎಂದು ವಿಧಾನ ಪರಿಷತ್​ ಮುಖ್ಯ ಸಚೇತಕ ಸಲೀಂ ಅಹಮ್ಮದ್​ ಹೇಳಿದರು.

ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನ ಪರಿಷತ್​ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ಖಚಿತ

ನೈಋತ್ಯ ಶಿಕ್ಷಕರ ಮತ್ತು ಪರವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವು ಖಚಿತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದಂತೆ ಈ ಎರಡೂ ಕ್ಷೇತ್ರದಲ್ಲಿಯೂ ಸಹ ಮತದಾರರು ಬದಲಾವಣೆ ಬಯಸಿದ್ದಾರೆ ಎಂದರು.

ಸರ್ಕಾರದ ಸಾಧನೆ ತಿಳಿಸಿ

ರಾಜ್ಯ ಕಾಂಗ್ರೆಸ್​ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್​ ಸೊರಕೆ ಮಾತನಾಡಿ, ಎಲ್ಲರ ಹಿತ ಕಾಪಾಡುವಲ್ಲಿ ಕಾಂಗ್ರೆಸ್​ ಕಂಕಣ ಬದ್ಧವಾಗಿದೆ. ಈ ಚುನಾವಣೆಯಲ್ಲಿ ಎಲ್ಲ ಮತದಾರರನ್ನು ತಲುಪಲು ಕಾರ್ಯಕರ್ತರಿಗೆ ಮಾತ್ರ ಸಾಧ್ಯವಿದೆ. ನಮ್ಮ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಿದರೆ ಗೆಲುವು ಸಾಧಿಸಬಹುದು. ಜನರು ಕೋಮು ಭಾವನೆ ಸ್ವೀಕರಿಸುವುದಿಲ್ಲ ಎನ್ನುವುದು ಕಳೆದ ವಿಧಾನಸಭಾ ಚುನಾವಣೆಯೇ ಉದಾಹಣೆಯಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಮುಖಂಡ ಎಂ.ಎ. ಗಫೂರ್​, ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಪ್ರಸಾದರಾಜ್​ ಕಾಂಚನ್​, ಶಹೀದ್​, ದಿನೇಶ್​ ಹೆಗ್ಡೆ ಮುಳುವಳ್ಳಿ, ಕೃಷ್ಣಪ್ಪ ಸುಳ್ಯ, ಡಾ. ಪ್ರೊ.ಸುಧೀರ್​ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ್​ ಕುಂದರ್​, ಸಂತೋಷ್​ ಕುಲಾಲ್​, ನವೀನಚಂದ್ರ ಶೆಟ್ಟಿ, ರಮೇಶ್​ ಕಾಂಚನ್​, ಶಂಕರ್​ ಕುಂದರ್​, ಸದಾಶಿವ ದೇವಾಡಿಗ, ಡಾ.ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಕುಶಲ ಶೆಟ್ಟಿ ಹಾಗೂ ಚುನಾವಣಾ ಉಸ್ತುವಾರಿಗಳು ಭಾಗವಹಿಸಿದ್ದರು. ವಕ್ತಾರ ಭಾಸ್ಕರ ರಾವ್​ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು. ಮುಖಂಡ ಉದಯಕುಮಾರ್​ ಶೆಟ್ಟಿ ಮುನಿಯಾಲ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net