

ಹುಬ್ಬಳ್ಳಿ: ಕುರುಬರಿಗೆ ಎಸ್ಟಿ ಮೀಸಲಾತಿ ಕೊಡಲು ಆಗ್ರಹಿಸಿ ಬೆಳಗಾವಿಯಲ್ಲಿ ಅಕ್ಟೋಬರ್ 2 ಮತ್ತು 3ರಂದು ಶೇಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಮಹಾ ಸಮಾವೇಶ ಏರ್ಪಾಟಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಕುರುಬ ಸಮುದಾಯದ ವತಿಯಿಂದ ಪೂರ್ವಭಾವಿ ಸಭೆಯನ್ನು ಸೆ. 5ರಂದು ಬೆಳಗ್ಗೆ 10.45ಕ್ಕೆ ಜರುಗಲಿದೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣವರ ವಿವರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಗೆ ಮಾಜಿ ಸಚಿವರಾದ ಎಚ್. ವಿಶ್ವನಾಥ ಹಾಗೂ ಎಚ್.ಎಂ. ರೇವಣ್ಣ ಆಗಮಿಸುವರು. ಅವರು ನಗರದಲ್ಲಿರುವ ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳೊಂದಿಗೆ ಅವರನ್ನು ಮೆರವಣಿಗೆ ಮೂಲಕ ಸಭೆಗೆ ಕರೆ ತರಲಾಗುವುದು ಎಂದರು.
ಧಾರವಾಡ ಜಿಲ್ಲೆ ಪ್ರದೇಶ ಕುರುಬರ ಸಂಘದ ಅಧ್ಯಕ್ಷೆ ಯಲ್ಲಮ್ಮ ನಾಯ್ಕರ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಕೆ.ಎನ್. ಗಡ್ಡಿ, ಕುಸುಮಾವತಿ ಶಿವಳ್ಳಿ, ಬಸವರಾಜ ಗುರಿಕಾರ, ವಿವಿಧ ತಾಲೂಕುಗಳ ಮುಖಂಡರು ಪಾಲ್ಗೊಳ್ಳುವರು ಎಂದರು.
ಸಮಾಜದ ಮುಖಂಡರಾದ ಶಿವಾನಂದ ಬೆಂತೂರ, ಪೀರಾಜಿ ಖಂಡೇಕರ, ನಾಗರಾಜ ಗುರಿಕಾರ, ಎಚ್.ಎಫ್. ಮುದಕಣ್ಣವರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.