

ಮಂಡ್ಯ: ಜಿಲ್ಲೆಯಲ್ಲಿ ನ.3ರಂದು ಪಂಚ ಗ್ಯಾರಂಟಿ ಯೋಜನೆ ಕುರಿತು ಗ್ಯಾರಂಟಿ ಸಮಾವೇಶ ಮತ್ತು ಸಂವಾದ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ಆದಂತಹ ಬದಲಾವಣೆ ಹಾಗೂ ಫಲಾನುಭವಿಗಳಿಗಾದ ಅನುಕೂಲತೆ ಕುರಿತು ಸಾಕ್ಷೃಚಿತ್ರಗಳ ಪ್ರದರ್ಶನವಾಗಬೇಕಾಗಿದೆ. ಗೃಹಲಕ್ಷ್ಮೀ ಮತ್ತು ಶಕ್ತಿ ಯೋಜನೆಯಿಂದ ಬದುಕಿನಲ್ಲಿ ಬದಲಾವಣೆ, ಉಳಿತಾಯ ಕಂಡಂತಹ ಜಿಲ್ಲೆಯಲ್ಲಿನ ಮಹಿಳೆಯರನ್ನು ಗುರುತಿಸಿ ಯಶೋಗಾಥೆ ತಯಾರಿಸಿ ಎಂದು ತಿಳಿಸಿದರು.
ಯುವನಿಧಿ ಮತ್ತು ಯುವನಿಧಿ ಫ್ಲಸ್ ಯೋಜನೆಯಿಂದ ವಿದ್ಯಾರ್ಥಿಗಳಿಗಾದಂತಹ ಉಪಯೋಗ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ಬಗ್ಗೆ ಪ್ರತ್ಯೇಕ ಸಾಕ್ಷೃಚಿತ್ರ ತಯಾರಿಸಿ. ಗ್ಯಾರಂಟಿ ಯೋಜನೆಯಿಂದಾಗಿರುವ ಬದಲಾವಣೆ, ಖರ್ಚು, ವೆಚ್ಚ, ಅನುದಾನ ಮತ್ತು ಸೌಲಭ್ಯ ಪಡೆದ ಫಲಾನುಭವಿಗಳ ಸಂಖ್ಯೆ ಕುರಿತು ತಾಲೂಕುವಾರು ಮಾಹಿತಿಗಳನ್ನು ಪಡೆದು ಸಾಕ್ಷೃಚಿತ್ರ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುವುದರಿಂದ ಮಾಹಿತಿ ಪಡೆಯಲು ಸಹಕರಿಸಬೇಕು. ಸಮಾವೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಗ್ಯಾರಂಟಿ ಸಮಾವೇಶ ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಸಮಾವೇಶ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಿ. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಉಪಾಧ್ಯಕ್ಷರಾದ ಪ್ರಶಾಂತ್‌ಬಾಬು, ರಾಜೇಂದ್ರಪ್ರಸಾದ್, ಸದಸ್ಯ ಮಹಮ್ಮದ್ ಅನ್ಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಆಶಾ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.