ಸಿಎಂ ಜತೆ ಚರ್ಚಿಸಿ ಸಮ್ಮೇಳನದ ದಿನಾಂಕ ನಿಗದಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

1
Published on

ಮಂಡ್ಯ: ಎಂಬತ್ತೇಳನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿಗದಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕನ್ನಡ ಸಾಹಿತ್ಯ ಆಸಕ್ತರು, ಸಂಘ ಸಂಸ್ಥೆಯ ಮುಖ್ಯಸ್ಥರ ಸಲಹೆ ಹಾಗೂ ಸೂಚನೆಗಳನ್ನು ಪಡೆದು ಸಮ್ಮೇಳನವನ್ನು ಅದ್ದೂರಿಯಾಗಿ ಸಂಘಟಿಸಲಾಗುವುದು ಎಂದರು.

ಸಮ್ಮೇಳನ ಆಯೋಜಿಸುವ ಸಮಯದಲ್ಲಿ ನಡೆಯವ ಸಭೆಗಳಿಗೆ ಆಹ್ವಾನ ನೀಡಿಲ್ಲ ಎಂದು ಸಾಹಿತ್ಯಾಸಕ್ತರು ಮನಸ್ತಾಪ ಮಾಡಿಕೊಳ್ಳಬಾರದು. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರೂ ಲಿಖಿತವಾಗಿ ತಮ್ಮ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಬಹುದು. ಸಮ್ಮೇಳನ ಆಯೋಜನೆಯ ದಿನಾಂಕವನ್ನು ಶೀಘ್ರವೇ ನಿರ್ಧರಿಸಲಾಗುವುದು. ಪ್ರಮುಖವಾಗಿ ಸಮ್ಮೇಳನದಲ್ಲಿ ಯುವಕರು, ರೈತರು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಮಹಿಳೆಯರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ. ಅಕ್ಕಮಹಾದೇವಿ ಹೆಸರಿನಲ್ಲಿ ವೇದಿಕೆ ಇರಲಿ. ಚಿಕ್ಕಮಂಡ್ಯದಲ್ಲಿ ಗುರುತಿಸಿರುವ ಸ್ಥಳ ಸರಿಯಿದೆ ಎಂದು ಅಭಿಪ್ರಾಯಿಸಿದರು.

ರೈತ ನಾಯಕಿ ಸುನಂದಾ ಜಯರಾಂ, ಸಮ್ಮೇಳನ ಶಾಂತಿಯುತವಾಗಿ ನಡೆಯಲಿ. ನಾವು ಚೆನ್ನಾಗಿ ಸಮ್ಮೇಳನ ನಡೆಸೋಣ. ಅಂತೆಯೇ ಮಹಿಳೆಯರೇ ಅಧ್ಯಕ್ಷರಾಗಲಿ ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಮಂಡ್ಯ ವಿಶ್ವವಿದ್ಯಾನಿಲಯ ಮುಂಭಾಗದಲ್ಲಿ ಸಮ್ಮೇಳನ ಮಾಡುವುದು ಸೂಕ್ತವೆಂದರು. ಮತ್ತೊರ್ವ ವಿಧಾನ ಪರಿಷತ್ ದಿನೇಶ್ ಗೂಳಿಗೌಡ ಅಮೆರಿಕ ಅಧ್ಯಕ್ಷರ ಆರೋಗ್ಯ ಸಲಹೆಗಾರರು ಮಂಡ್ಯ ತಾಲೂಕು ಹಲ್ಲೇಗೆರೆಯವರಾದ ವಿವೇಕ್ ಮೂರ್ತಿ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಎಂದರು.

ವಿಚಾರ ಸಂಕಿರಣದಲ್ಲಿ ಚರ್ಚೆಯಾಗಲಿ: ಸಮ್ಮೇಳನದಲ್ಲಿ ವಿಚಾರ ಸಂಕಿರಣಗಳು ನಡೆದು ಕುವೆಂಪು, ಡಾ. ರಾಜಕುಮಾರ್, ರಾಜಕೀಯ ಕೇತ್ರದಲ್ಲಿ ಶಾಂತವೇರಿ ಗೋಪಾಲಗೌಡ, ಎಸ್.ನಿಜಲಿಂಗಪ್ಪ ಅವರ ಕುರಿತು ಚರ್ಚೆ ನಡೆಯಬೇಕೆಂದು ಜಯರಾಮು ಕೀಲಾರ ಹೇಳಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ ಅವರು, ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಎಂದರೆ ಜಾನಪದ ವಿದ್ವಾಂಸ ವ.ನಂ.ಶಿವರಾಮು ಸಮಿತಿಗಳ ರಚನೆಯಾಗಲಿ. ಅಲ್ಲಿ ಈ ಕುರಿತು ವಿಸ್ತತವಾದ ಚರ್ಚೆಯಾಗಲಿ ಎಂದರು. ರೈತ ಹೋರಾಟಗಾರ ಕೆ.ಬೋರಯ್ಯ ಮಾತನಾಡಿ, ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡಿ, ರಾಜಕಾರಣಿಗಳಿಗೆ ಮನ್ನಣೆ ನೀಡುವುದನ್ನು ಕಡಿಮೆ ಮಾಡಿ. ಬೇರೆಯವರು ಕೇಳಿದರೆ ನಾವು ಅದಕ್ಕೆ ಉತ್ತರ ನೀಡುತ್ತೇವೆ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ ಮಾತನಾಡಿ, ಯುವಕರಿಗೆ ಆದ್ಯತೆ ನೀಡಿ, ಮಂಡ್ಯದಲ್ಲೇ ಸಮ್ಮೇಳನ ನಡೆಯಲಿ. ಇಲ್ಲಿ ನಡೆದ ಎಲ್ಲ ಸಮ್ಮೇಳನಗಳು ಯಶಸ್ವಿಯಾಗಿವೆ ಎಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಎನ್.ಯತೀಶ್, ಮಾಜಿ ಶಾಸಕ ಎಂ.ಶ್ರೀನಿವಾಸ್, ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮುದ್ದೇಗೌಡ, ಧರಣೇಂದ್ರಯ್ಯ, ಗೌರವ ಕಾರ್ಯದರ್ಶಿ ಹೂಸ್ಕೂರು ಕೃಷ್ಣೇಗೌಡ, ಎಂ.ಬಿ.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net