

ಚನ್ನಗಿರಿ: ಪ್ರತಿ ಬಾರಿ ಸಭೆ ನಡೆಸಿದಾಗಲೂ ತಾಲೂಕಿನ ಕೆಲ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಇನ್ಮುಂದೆ ನಿಮ್ಮ ವರ್ತನೆ ಸಹಿಸುವುದಿಲ್ಲ. ಗೈರಾದ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಮೇಲಧಿಕಾರಿಗಳ ಜತೆ ಚರ್ಚಿಸುವೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ತಾಲೂಕು ಕಛೇರಿ ಸಭಾಂಗಣದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿದರು.
ಅಧಿಕಾರಿಗಳು ಸಭೆಗೆ ಬಾರದೆ ತಮ್ಮ ಸಿಬ್ಬಂದಿಯನ್ನು ಕಳಿಸುತ್ತಿರುವುದು ಸರಿಯಲ್ಲ. ನನ್ನ ಒಳ್ಳೆಯತನ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ಇನ್ಮುಂದೆ ನಿರ್ಲಕ್ಷೃ ವಹಿಸಿದರೆ ಸಹಿಸಲ್ಲ ಎಂದರು.
ಗೃಹಲಕ್ಷ್ಮೀ ಯೋಜನೆ ಆ. 30 ರಂದು ಉದ್ಘಾಟನೆಗೊಳ್ಳಲಿದ್ದು, ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಲಿದ್ದಾರೆ ಎಂದರು.
ಅದರಂತೆ, ಏಕಕಾಲದಲ್ಲಿ ಕಾರ್ಯಕ್ರಮ ನೇರಪ್ರಸಾರ ಆಗಲಿದೆ. ತಾಲೂಕಿನ ಎಲ್ಲ 61 ಗ್ರಾಪಂಗಳಲ್ಲಿ ಮತ್ತು ಪಟ್ಟಣದ 6 ಕಡೆಗಳಲ್ಲಿ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು ಎಂದರು.
ತಾಲೂಕಿನಲ್ಲಿ ಶೇ.87 ರಷ್ಟು ಗೃಹಲಕ್ಷ್ಮೀ ಯೋಜನೆ ನೋಂದಣಿ ಕಾರ್ಯ ಮುಗಿದಿದೆ. ಉಳಿದ ಶೇ. 13 ರಷ್ಟು ಜನರನ್ನು ಗುರುತಿಸಿ ನೋಂದಣಿ ಮಾಡಿಸುವಂತೆ ತಿಳಿಸಲಾಗಿದೆ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಉತ್ತಮ್ ಮಾತನಾಡಿ, ತಾಲೂಕಿನ 61 ಗ್ರಾಪಂಗಳಲ್ಲಿ ಕಾರ್ಯಕ್ರಮ ಏಕಕಾಲದಲ್ಲಿ ಪ್ರಾರಂಭಗೊಳ್ಳಲಿದೆ. ಮಹಿಳೆಯರನ್ನು ಆಕರ್ಷಿಸಲು ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಆಸನಗಳ ವ್ಯವಸ್ಥೆ, ಕಾರ್ಯಕ್ರಮದ ವೀಕ್ಷಣೆಗೆ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಯೋಜನೆಯ ಬಗ್ಗೆ ಗ್ರಾಮದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರವಿಕುಮಾರ್, ಸಿಡಿಪಿಒ ಸದಾನಂದ್, ಆಹಾರ ಇಲಾಖೆ ಶಿರಸ್ತೇದಾರ್ ಜಯರಾಂ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಭಿಯಂತರ ಲೋಹಿತ್, ಲೋಕೋಪಯೋಗಿ ಅಭಿಯಂತರ ರವಿಕುಮಾರ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಆರಾಧ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಇತರರಿದ್ದರು.