

ಜಗಳೂರು: ಪಟ್ಟಣದ ಮುಖ್ಯರಸ್ತೆಯಲ್ಲಿ ಒತ್ತುವರಿಯಾಗಿರುವ ಕಟ್ಟಡಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು, ಭವಿಷ್ಯದ ಮುಂದಾಲೋಚನೆಯಿಂದ 69 ಅಡಿ ರಸ್ತೆ ವಿಸ್ತರಣೆಯಾಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸಬೇಕು ಎಂದು ವಿವಿಧ ಪ್ರಗತಿಪರ ಹೋರಾಟಗಾರರು ನಿರ್ಣಯ ಕೈಗೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ವಕೀಲರ ಸಂಘದ ತಾಲೂಕಾಧ್ಯಕ್ಷ ಟಿ. ಬಸವರಾಜ್ ಮಾತನಾಡಿ, ರಾಜ್ಯ ಹೆದ್ದಾರಿ ಅಗಲೀಕರಣ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪಟ್ಟಣದ ಸೌಂದಯೀಕರಣ ಹಾಗೂ ಅಭಿವೃದ್ಧಿಗಾಗಿ ಶಾಸಕ ಬಿ. ದೇವೇಂದ್ರಪ್ಪ ಅವರು ದಿಟ್ಟ ಹೆಜ್ಜೆಯನ್ನಿಟ್ಟು ರಸ್ತೆ ಅಗಲಿಕರಣಕ್ಕೆ ಚಾಲನೆ ನೀಡಿದ್ದಾರೆ. ಆದರೆ ಇದನ್ನು ಸಹಿಸದವರು ತಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಶಾಸಕರಿಗೆ ತಾಲೂಕಿನ ಎಲ್ಲ ವರ್ಗದವರ ಸಂಪೂರ್ಣ ಬೆಂಬಲ, ಸಹಕಾರವಿದೆ. ಯಾರ ಮುಲಾಜಿಗೂ ಜಗ್ಗದೆ ಒತ್ತುವರಿಯಾಗಿರುವ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಕರ್ತ ಡಿ. ಶ್ರೀನಿವಾಸ್ ಮಾತನಾಡಿ, ಪಪಂಗೆ ಸಂಬಂಧಿಸಿದ 26 ಮಳಿಗೆಗಳು ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಇವುಗಳನ್ನು ತೆರವುಗೊಳಿಸಿದರೆ ವಿಶಾಲವಾದ ರಸ್ತೆಯಾಗುತ್ತದೆ. ಆದರೆ ಪಪಂ ಕೇವಲ 5 ಅಡಿ ಮಾತ್ರ ತೆರವುಗೊಳಿಸಿ ಮಳಿಗೆಗಳನ್ನು ನವೀಕರಣ ಮಾಡಲು ಅವಕಾಶ ನೀಡಿರುವುದು ಒಳ್ಳೆಯ ನಿರ್ಣಯವಲ್ಲ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದರು.
ರೈತ ಸಂಘದ ಮುಖಂಡ ಕುಮಾರ್ ಭರಮಸಮುದ್ರ ಮಾತನಾಡಿ, ಪಪಂಗೆ ಸೇರಿದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವರು ಮಳಿಗೆಗಳನ್ನು ನಿರ್ವಿುಸಿ ಸುಮಾರು 65 ವರ್ಷಗಳಿಂದ ಅಲ್ಲೇ ದುಡಿಯುತ್ತಿದ್ದಾರೆ. ಈಗ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡದೇ ನ್ಯಾಯಾಲಯದ ಮೊರೆ ಹೋಗಿರುವುದು ಎಷ್ಟು ಸರಿ? ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾದ ಕೂಡಲೇ ಒಂದು ಅಡಿ ಜಾಗ ಬಿಡದೆ ಸಂಪೂರ್ಣ ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಆರ್. ಓಬಳೇಶ್, ಸಣ್ಣ ಓಬಯ್ಯ, ಸಿ.ಎಂ. ಹೊಳೆ ತಿಪ್ಪೇಸ್ವಾಮಿ, ರುದ್ರೇಶ್, ನವ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಲಿಂಗಪ್ಪ, ಪ್ರಾಚಾರ್ಯ ನಾಗಲಿಂಗಪ್ಪ, ಎಸ್ಎಫ್ಐ ಮುಖಂಡ ಅನಂತ್ ರಾಜ್, ಗೌರಿಪುರ ಸತ್ಯಮೂರ್ತಿ, ಮಹಮದ್ ನಜೀರ್ ಅಹಮದ್, ಬುಳ್ಳಳ್ಳಿ ರಾಜಪ್ಪ, ಇಂದ್ರಮ್ಮ, ರೈತ ಮುಖಂಡ ಲೋಕೇಶ್ ಸೇರಿ ಮತ್ತಿತರರಿದ್ದರು.
ಮಳಿಗೆಗಳ ಎದುರು ಪ್ರತಿಭಟನೆ: ಸಭೆಯ ನಂತರ ಹೋರಾಟಗಾರರು ಪ್ರವಾಸಿ ಮಂದಿರದಿಂದ ಮೆರವಣಿಗೆಯ ಮೂಲಕ ಮಳಿಗೆಗಳ ಬಳಿ ಬಂದು ಪ್ರತಿಭಟನೆ ನಡೆಸಿದರು. ಮುಖ್ಯರಸ್ತೆಯ ಮಧ್ಯದಿಂದ ಮಳಿಗೆಗಳ ಉದ್ದ ಅಳತೆ ಮಾಡಿದರು. ಆದರೆ 50 ಅಡಿ ಬದಲು 32 ಅಡಿ ಇರುವುದು ಕಂಡು ಮಾಲೀಕರ ವಿರುದ್ಧ ಘೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನವೀಕರಣ ಮಾಡುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕು. ಮಳಿಗೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಮಾಡಬಾರದು ಎಂದು ಎಚ್ಚರಿಕೆ ನೀಡಿದರು.