

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.9ರಿಂದ ಮೂರು ದಿನ ರಾಜ್ಯದ್ಯಂತ ಮೊದಲ ಹಂತದ ಗ್ರಾಮ ಚಲೋ ಅಭಿಯಾನ ಹಮ್ಮಿಕೊಂಡಿದ್ದು, ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ, ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಗಳಿಸಿದ್ದ ಮತಗಳಿಗಿಂತ ಈ ಬಾರಿ ಶೇ.10ರಷ್ಟು ಮತವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದ್ದು, ಅಭಿಯಾನದಲ್ಲಿ ತೊಡಗಿಕೊಳ್ಳುವ ಪ್ರತಿ ಕಾರ್ಯಕರ್ತರಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಕೇಂದ್ರದ ಜನಪರ ಕಾರ್ಯಕ್ರಮ ತಿಳಿಸುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಅರಿವು ಮೂಡಿಸುತ್ತೇವೆ. ಇಂದಿನಿಂದಿಂದಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ತಯಾರಿ ಮಾಡಲಾಗುತ್ತದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಬೃಹತ್ ಸಂಘಟನಾತ್ಮಕ ಕಾರ್ಯತಂತ್ರವಾಗಿದ್ದು, ತಳಮಟ್ಟದಲ್ಲಿ ಪ್ರತಿಯೊಬ್ಬರನ್ನೂ ತಲುಪಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಹಲವು ಕಾರ್ಯಾಗಾರ ನಡೆಯಲಿದ್ದು, ನಿಯುಕ್ತಿಗೊಂಡಿರುವ ಕಾರ್ಯಕರ್ತರು, ತಮ್ಮ ಗ್ರಾಮಗಳನ್ನು ಬಿಟ್ಟು ಇತರ ಗ್ರಾಮಗಳಿಗೆ ತೆರಳಿ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಮತ್ತು ನರೇಂದ್ರ ಮೋದಿ ಅವರ ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮನೆ-ಮನೆಗೆ ಮೋದಿ ಸರ್ಕಾರದ ಸಾಧನೆಯ ಪ್ರಚಾರ, ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಅಭಿಯಾನ, ಬೂತ್ ಸಶಕ್ತೀಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವ ಕಾರ್ಯವಾಗಲಿದೆ. ಅಲ್ಲದೆ, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧವೂ ಅರಿವು ಮೂಡಿಸಲಾಗುತ್ತದೆ ಎಂದರು.