ಮುಂದಿನ ಪೀಳಿಗೆಗೆ ರಂಗ ಮಂದಿರ ಅಗತ್ಯ

nelamangala meeting
nelamangala meeting
Published on

ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಹೇಳಿಕೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರಂಗಭೂಮಿ, ಜಾನಪದ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅಪಾರ. ನೂರಾರು ಸಂಖ್ಯೆಯ ಕಲಾವಿದರಿಗೆ ಜನ್ಮ ಕೊಟ್ಟಿದೆ. ಆದರೆ, ಇಲ್ಲಿ ಸುಸಜ್ಜಿತ ರಂಗ ಮಂದಿರ ಇಲ್ಲದಿರುವುದು ಬೇಸರದ ಸಂಗತಿ ಎಂದು ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಹೇಳಿದರು.
ನಗರದ ನಾರಾಯಣ್‌ಗೌಡ ಪಾರ್ಟಿ ಹಾಲ್‌ನಲ್ಲಿ ತಾಲೂಕು ಕಲಾವಿದರಿಂದ ರಂಗ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಲೆ ಮತ್ತು ಕಲಾವಿದರ ಶ್ರೇಯೋಭಿವೃದ್ಧಿಗೆ ಸುಸಜ್ಜಿತ ರಂಗ ಮಂದಿರದ ಅವಶ್ಯಕತೆ ಇದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರ ನೀಡುವಂತೆ ಆಗ್ರಹಿಸಿದರು.
ನಗರಸಭೆ ಕಚೇರಿ ಸಮೀಪದಲ್ಲಿರುವ ಬಯಲು ರಂಗ ಮಂದಿರ ಶಿಥಿಲಗೊಂಡು ವರ್ಷಗಳೇ ಕಳೆದರೂ ದುರಸ್ಥಿಯಾಗಿಲಿ, ನೂತನ ಕಟ್ಟಡವಾಗಲಿ ನಿರ್ಮಾಣ ಮಾಡಿಲ್ಲ. ಶಿಥಿಲವಾದ ರಂಗ ಮಂದಿರವನ್ನು ಬಳಸಿ, ನೂತನ ನಗರಸಭೆ ಕಾರ್ಯಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದ್ದರಿಂದ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳ ಕಲಾಭಿವೃದ್ಧಿಗಾಗಿ ಸೂಕ್ತ ಜಾಗವನ್ನು ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಜಿ.ಗೋಪಾಲ್ ಮಾತನಾಡಿ, 1950ರಲ್ಲಿ ಕನ್ನಡ ಕಲಾ ಸಂಘವನ್ನು ಆರಂಭಿಸಿದ್ದ ತಾಲೂಕಿನ ಹಿರಿಯ ಕಲಾವಿದರು, ಸಾಮಾಜಿಕ ಮತ್ತು ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದರು. ಹಿರಿಯ ಕಲಾವಿದ ದಿ.ಪಾರ್ಶ್ವನಾಥ್ ಅವರು ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂದಿನ ಶಾಸಕ ಗುರುಪ್ರಸಾದ್ ಅವರ ನೇತೃತ್ವದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿ ಕೊಟ್ಟಿದ್ದರು. ಅದರಲ್ಲಿ ನೂರಾರು ಮಂದಿ ರಂಗ ಕಲಾವಿದರ ನಿತ್ಯ ನಾಟಕ ಪ್ರದರ್ಶನ ಮಾಡುತ್ತಾ ಸಾರ್ವಜನಿಕರಿಗೆ ಮನರಂಜನೆಯನ್ನು ನೀಡುತ್ತಿದ್ದರು.
ಕಳೆದ ದಶಕದಿಂದಲೂ ಬಯಲು ರಂಗಮಂದಿರ ಸಂಪೂರ್ಣವಾಗಿ ಶೀಥಿಲಗೊಂಡಿದ್ದು, ಸಾಕಷ್ಟು ಮಂದಿ ಹಿಂದಿನ ಪುರಸಭೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೂಡಲೇ ಶಾಸಕರು, ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು ಎಂದರು.
ಕಲಾವಿದ ಬೂದಿಹಾಲ್‌ಕಿಟ್ಟಿ, ಕಸಾಪ ಗೌರವ ಕಾರ್ಯದರ್ಶಿ ಪ್ರಕಾಶ್, ಕೋಶಾಧ್ಯಕ್ಷ ಎಂ.ನಾರಾಯಣ್‌ಗೌಡ, ಅಂಜನಾದ್ರಿ ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಚಿಕ್ಕಮಾರನಹಳ್ಳಿ ದಿನೇಶ್, ಪ್ರತಿಭಾ ರಂಗ ಸಂಸ್ಥೆ ಅಧ್ಯಕ್ಷ ರಾಮಯ್ಯ, ಸಿಂಚನಾ ಕಲಾಕೇಂದ್ರ ಟ್ರಸ್ಟ್ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ, ಮಾರುತಿ ಕಲಾವಿದರ ಸಂಘದ ಅಧ್ಯಕ್ಷ ರಾಮಚಂದ್ರ, ಸಾಹಿತಿ ವೆಂಕಟೇಶ್.ಆರ್.ಚೌಥಾಯಿ, ವೈ.ಆನಂದ್, ಕಲಾವಿದ ಪೈಲ್ವಾನ್ ಶಿವಣ್ಣ ಸಿದ್ಧಗಂಗಯ್ಯ, ರಾಜಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net