ಏಕಕಾಲಕ್ಕೆ 61 ಗ್ರಾಪಂಗಳಲ್ಲಿ ಗೃಹಲಕ್ಷ್ಮೀ ಜಾರಿ

MK
Published on

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲೂಕಿನ 61 ಗ್ರಾಪಂಗಳ ವ್ಯಾಪ್ತಿಯಲ್ಲಿ ಆ. 27ರಂದು ಸರ್ಕಾರದ ಆದೇಶದಂತೆ ಏಕಕಾಲದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ತರಲು ಅನುಷ್ಠಾನಗೊಳಿಸಲಾಗುತ್ತದೆ. ಅದಕ್ಕಾಗಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಾರ್ಯಕ್ರಮ ತಯಾರಿ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಪಿ.ಐ. ಯರ‌್ರಿಸ್ವಾಮಿ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಕರೆದಿದ್ದ ಗೃಹಲಕ್ಷ್ಮೀ ಯೋಜನೆ ಜಾರಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಮಾಜಿ ಸಿಎಂ ದೇವರಾಜ ಅರಸುರವರ ಜಯಂತಿ ಕಾರ್ಯಕ್ರಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.

ಜಿಲ್ಲೆಯಲ್ಲಿ ಚನ್ನಗಿರಿ ದೊಡ್ಡ ತಾಲೂಕು ಕೇಂದ್ರವಾಗಿ 61 ಗ್ರಾಪಂ ಹೊಂದಿದೆ. ಆದ್ದರಿಂದ ಆರು ಹೋಬಳಿ ಮಟ್ಟದಲ್ಲಿ ಪಂಚಾಯಿತಿ ಒಟ್ಟುಗೂಡಿಸಿ ಗೃಹಲಕ್ಷ್ಮೀ ಕಾರ್ಯಕ್ರಮದಲ್ಲಿ ಹೆಚ್ಚು ಫಲಾನುಭವಿಗಳು ಭಾಗವಹಿಸಬೇಕು ಹಾಗೂ ಪ್ರತಿ ಹೋಬಳಿಯಲ್ಲಿ ಎಲ್‌ಇಡಿ ಅಳವಡಿಸಬೇಕು. ಸರ್ಕಾರದ ಕಾರ್ಯಕ್ರಮವಾಗಿರುವ ಕಾರಣ ನೇರ ಪ್ರಸಾರ ಇರುತ್ತದೆ. ಯಾವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾರ ಜತೆಯಲ್ಲಿ ಸಂವಾದ ನಡೆಸುತ್ತಾರೆ ತಿಳಿಯುವುದು ಕಷ್ಟ. ಹಾಗಾಗಿ, ಎಲ್ಲರೂ ಜಾಗೃತರಾಗಿರಬೇಕು ಎಂದರು.

ಪಟ್ಟಣದಲ್ಲಿ 23 ವಾರ್ಡುಗಳಲ್ಲಿ ಶಾಲೆ ಸಮುದಾಯ ಭವನ ಯಾವುದೇ ಇದ್ದರೂ ಬಳಕೆ ಮಾಡಿಕೊಂಡು ಕಾರ್ಯಕ್ರಮ ಆಯೋಜಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜಯಂತಿ ಆ.20ರಂದು ತಾಲೂಕು ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಅಧಿಕಾರಿಗಳು ತಪ್ಪದೇ ಹಾಜರಿರಬೇಕು ಎಂದರು.

ಸ್ವ್ವಾತಂತ್ರ್ಯ ದಿನಾಚರಣೆಯಲ್ಲಿ ಸರ್ಕಾರಿ ಕಟ್ಟಡದ ಮೇಲೆ ಮೂರು ದಿನಗಳ ಕಾಲ ದೀಪಾಲಂಕಾರ ಮಾಡಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಬೆಳಗ್ಗೆ 9 ಗಂಟೆಗೆ ತಹಸೀಲ್ದಾರ್ ಧ್ವಜಾರೋಹಣ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜ್, ಪುರಸಭೆ ಅಧ್ಯಕ್ಷರು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ್, ನೋಂದಣಾಧಿಕಾರಿ ಅಣ್ಣಪ್ಪ, ಆಹಾರ ನಿರೀಕ್ಷಕ ಜಯರಾಂ, ಬೆಸ್ಕಾಂ ಎಇಇ ಮಂಜಾನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net