ವಿವಿಧ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಿರಲು ಸೂಚನೆ

23CBP1
Published on

ಚಿಕ್ಕಬಳ್ಳಾಪುರ: ಯಾವುದೇ ಅಕ್ರಮ, ಲೋಪ ದೋಷಗಳಿಗೆ ಅವಕಾಶ ನೀಡದಂತೆ ಜಿಲ್ಲಾ ಕೇಂದ್ರದಲ್ಲಿ ಗೆಜೆಟೆಡ್​ ಪ್ರೊಬೇಷಿನರ್ಸ್​ ಪರೀಕ್ಷೆಯನ್ನು ನಡೆಸಲು ಜಿ.ಪಂ.ಸಿಇಒ ಪ್ರಕಾಶ್​ ಜಿ.ಟಿ ನಿಟ್ಟಾಲಿ ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೈಗೊಂಡಿದ್ದ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ತಾಲೂಕು ಕೇಂದ್ರ ಸ್ಥಾನದಲ್ಲಿನ 13 ಪರೀಕ್ಷಾ ಕೇಂದ್ರಗಳಲ್ಲಿ ಆ.27 ರಂದು 2023-&24ನೇ ಸಾಲಿನ ಗೆಜೆಟೆಡ್​ ಪ್ರೊಬೇಷಿನರ್ಸ್​ ಗ್ರೂಪ್​ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ಯಾವುದೇ ಅಕ್ರಮ, ಲೋಪದೋಷಗಳಿಗೆ ಅವಕಾಶ ನೀಡಬಾರದು. ಸುಗಮ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ 6056 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು ನಿಗದಿತ ಕೇಂದ್ರಗಳಲ್ಲಿ ಬೆಳಕು, ಕುಡಿಯುವ ನೀರು, ಕೊಠಡಿಗಳ ಸ್ವಚ್ಛತೆ, ಗಾಳಿಯ ವ್ಯವಸ್ಥೆ, ಶೌಚಾಲಯ, ಸುಸ್ಥಿಯಲ್ಲಿರುವ ಗಡಿಯಾರ ಸೇರಿದಂತೆ ಅಗತ್ಯ ಸೌಕರ್ಯ ಹೊಂದಿರುವುದನ್ನು ದೃಢಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎನ್​ ಭಾಸ್ಕರ್​, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬೈಲಾಂಜಿನಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯಿತ್ರಿ, ವಿಷಯ ಪರೀವಿಕ್ಷಕ ಜಮೀರ್​ ಪಾಷಾ ಮತ್ತಿತರರು ಇದ್ದರು.

*ಸಭೆಯಲ್ಲಿ ಪ್ರಮುಖ ಚರ್ಚೆ

ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳ ತಂಡದ ಬೆಂಗಾವಲು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ, ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್​ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಘೋಷಣೆ ಪಾಲನೆ, ಪರೀಕ್ಷಾ ಕೇಂದ್ರ ಸುತ್ತ-ಮುತ್ತಲಿನ ಜೆರಾಕ್ಸ್​ ಅಂಗಡಿಗಳನ್ನು ಮುಚ್ಚಿಸುವುದು, ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಫ್ರಿಸ್ಕಿಂಗ್​ ಮಾಡಿಸುವುದು, ಕೊಠಡಿಯೊಳಗೆ ಎಲೆಕ್ಟ್ರಾನಿಕ್ಸ್​ ಉಪಕರಣಗಳನ್ನು ತೆಗೆದುಕೊಂಡು ಹೋಗದಂತೆ ಎಚ್ಚರವಹಿಸುವುದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net