

ಕಂಪ್ಲಿ: ತಾಲೂಕಿನ ಕಣವಿ ತಿಮ್ಮಲಾಪುರದ ಹಿರೇಗುಡ್ಡ ಪ್ರದೇಶದಲ್ಲಿ ಕಲ್ಲು ಗುಂಡುಗಳ ಮೇಲೆ ಮೂರು ಸಾವಿರ ವರ್ಷಗಳ ಹಿಂದಿನ ಪ್ರಾಗೈತಿಹಾಸ ಕಾಲದ ವರ್ಣಚಿತ್ರಗಳು ಪತ್ತೆಯಾಗಿವೆ. ಪತ್ತೆಯಾದ ಚಿತ್ರಗಳಲ್ಲಿ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಹಂದಿ(ಕಾಡುಕೋಣ) ಚಿತ್ರ ಎಂದು ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ತಿಳಿಸಿದರು.
ಇದನ್ನೂ ಓದಿ:ಮೈ ಮಣಿಪಾಲ್ ವರ್ಣಚಿತ್ರ ಕಲಾ ಪ್ರದರ್ಶನ ಅನಾವರಣ
ಈ ಚಿತ್ರಗಳನ್ನು ಶುಕ್ರವಾರ ಪತ್ತೆ ಮಾಡಿದ್ದು, ಬೃಹತ್ ಶಿಲಾಯುಗಕ್ಕೆ ಸೇರಿದ ಚಿತ್ರಗಳಾಗಿವೆ. ಎರಡು ಕಲ್ಲುಗುಂಡುಗಳ ಮೇಲೆ 8ಅಡಿ ಉದ್ದ, 5ಅಡಿ ಅಗಲದ ಹಂದಿ(ಕಾಡುಕೋಣ) ಚಿತ್ರವಿದೆ. ಇದರ ಅಡಿಯಲ್ಲಿ ಮಾನವರ ಚಿತ್ರಗಳಿವೆ. ಎರಡನೇ ಕಲ್ಲುಗುಂಡು ಮೇಲೆ ಇದರಲ್ಲಿ ಚೌಕಕೋನದ ಗೂಳಿ, ಮಾನವ, ದನ, ಜಿಂಕೆಯ ಚಿತ್ರಗಳಿದ್ದು, ಅಸ್ಪಷ್ಟವಾಗಿವೆ. ಈ ಚಿತ್ರಗಳನ್ನು ಅವಲೋಕಿಸಿದಾಗ ಬೃಹತ್ ಶಿಲಾಯುಗ ಅಥವಾ ಕಬ್ಬಿಣ ಯುಗಕ್ಕೆ ಸೇರಿದ ಆದಿಮಾನವ ನೆಲೆಯಾಗಿರಬಹುದು ಎಂದು ಇತಿಹಾಸ ಸಂಶೋಧಕ ಪ್ರೊ.ರವಿ ಕೋರಿಶೆಟ್ಟರ್, ಡಾ.ಶರಣಬಸಪ್ಪ ಕೋಲ್ಕಾರ್, ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಶೇಜೇಶ್ವರ ಹೇಳಿದ್ದಾರೆ.