

ಬಂಕಾಪುರ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆಯಿಂದ ಸರಳ ಹೆರಿಗೆ ಜತೆಗೆ ಆರೋಗ್ಯವಂತ ಮಗು ಪಡೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ಹೇಳಿದರು.
ಪಟ್ಟಣದ ಶ್ರೀ ಫಕೀರೇಶ್ವರ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ, ಪೋಷಣೆ ಅಭಿಯಾನದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪೌಷ್ಟಿಕ ಆಹಾರ ಕೊರತೆಯಿಂದ ಗರ್ಭಿಣಿಯರಲ್ಲಿ ರಕ್ತ ಹೀನತೆ ಉಂಟಾಗಿ ಜನಿಸುವ ಮಗು ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲು ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ, ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಆರೋಗ್ಯವಂತ ಮಗುವನ್ನು ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಲಿಂಗನಗೌಡ್ರ ಮಾತನಾಡಿ, ಸಮಾಜಕ್ಕೆ ಆರೋಗ್ಯವಂತ ಮಗು ನೀಡುವ ಉದ್ದೇಶದಿಂದ ಸರ್ಕಾರ ಮಾತೃಪೂರ್ಣ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃವಂದನಾ, ಮಾತೋಶ್ರೀ ಯೋಜನೆಗಳನ್ನು ಜಾರಿಗೆ ತಂದಿದ್ದು, ಗರ್ಭಿಣಿ, ಬಾಣಂತಿಯರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಗರ್ಭಿಣಿಯರಿಗೆ ಸಾಮೂಹಿಕವಾಗಿ ಉಡಿ ತುಂಬುವ ಮೂಲಕ ಸೀಮಂತ ಕಾರ್ಯ ನೆರವೇರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ, ಅಧ್ಯಕ್ಷೆ ಮಮತಾ ಮಾಗಿ, ಅಯೂಭಖಾನ ಪಠಾಣ, ಮಂಜಪ್ಪ ತಳವಾರ, ಸುರೇಶ ಕುರಗೋಡಿ, ಆಂಜನೇಯ ಗುಡಗೇರಿ, ರಾಜು ಟೋಪಣ್ಣವರ, ಗೀತಾ ದೇಸಾಯಿ, ನಾಸೀರ ಹರ್ಡೆವಾಲೆ, ರಾಜು ಬಡ್ಡಿ, ರಾಣಿ ಬೆಂದ್ರೆ, ಶಿಲ್ಪಾ ಮುರಿಗೆಣ್ಣವರ, ಇತರರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಜವಳಗೇರಿ ಕಾರ್ಯಕ್ರಮ ನಿರ್ವಹಿಸಿದರು.