

ಮಂಗಳೂರು: ದುಬೈನಿಂದ ಚಿಕಿತ್ಸೆಗೆಂದು ಬಂದು ಕ್ವಾರಂಟೈನ್ ವೇಳೆ ಸರಿಯಾಗಿ ಚಿಕಿತ್ಸೆ ಲಭಿಸದೆ ಗರ್ಭದಲ್ಲಿದ್ದ ಮಗು ತೀರಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕುಟುಂಬದವರು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ.
ತಮಗಾದ ಕಷ್ಟಗಳ ಬಗ್ಗೆ ಡಿಸಿಯವರೊಂದಿಗೆ ಅಳಲು ತೋಡಿಕೊಂಡ ಕುಟುಂಬ, ಮುಂದೆ ಬರುವ ಗರ್ಭಿಣಿಯರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು. ಘಟನೆ ವಿವರ ಪಡೆದುಕೊಂಡ ಜಿಲ್ಲಾಧಿಕಾರಿ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪ್ರಕರಣವೇನು?: ಹೆರಿಗೆಗಾಗಿ ದುಬೈನಿಂದ ಮೇ 12ರಂದು ರಾತ್ರಿ ಆಗಮಿಸಿದ ಮಹಿಳೆಯನ್ನು ಹೋಟೆಲ್‌ವೊಂದರ ಕ್ವಾರಂಟೈನ್ ಕೊಠಡಿಗೆ ತಲುಪಿಸಲಾಗಿತ್ತು. ಕರೊನಾ ತಪಾಸಣೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಗರ್ಭಿಣಿಯರಿಗೆ ಅನುಕೂಲವಾಗುವಂತೆ ಕ್ವಾರಂಟೈನ್ ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳು, ಸಹಾಯಕರ ಸಹಿತ ಬೇಕಾದ ವ್ಯವಸ್ಥೆ ಇದೆ ಎಂದು ಜಿಲ್ಲಾಡಳಿತ ಹೇಳಿತ್ತಾದರೂ ಸುಲಭದಲ್ಲಿ ವೈದ್ಯರು ಸಿಕ್ಕಿರಲಿಲ್ಲ. ಹಲವು ಬಾರಿ ವೈದ್ಯರು ಬಂದರೂ ಬಿಪಿ ಪರೀಕ್ಷಿಸುವ ಸಾಧನ ಮರೆತಿದ್ದೇವೆ ಎಂದು ನೆಪವೊಡ್ಡುತ್ತಿದ್ದರು.
ಗರ್ಭಿಣಿಯರಿಗೆ ಪರೀಕ್ಷೆ ನೆಗೆಟಿವ್ ಬಂದರೆ ಅವರನ್ನು ಮನೆಯಲ್ಲಿ ನಿಗಾವಣೆಯಲ್ಲಿರಿಸಬಹುದು ಎನ್ನುವ ಸರ್ಕಾರದ ಮಾರ್ಗಸೂಚಿಯನ್ವಯ ಮಹಿಳೆ ಜಿಲ್ಲಾಡಳಿತದಿಂದ ಪತ್ರ ಪಡೆದಿದ್ದು, ಶಿವಭಾಗ್ ಬಳಿಯ ತಮ್ಮ ಫ್ಲಾಟ್‌ಗೆ ಹೋಗಲು ಮುಂದಾಗಿದ್ದರು.
ಆದರೆ, ನಿವೃತ್ತ ಹಾಗೂ ಹಾಲಿ ಹಿರಿಯ ಪೊಲೀಸ್ ಅಧಿಕಾರಿಗಳಿರುವ ಆ ಫ್ಲ್ಯಾಟ್ ನಿವಾಸಿಗಳು ಮಹಿಳೆಗೆ ಪ್ರವೇಶವನ್ನು ನಿರಾಕರಿಸಿದ್ದರು. ಎರಡು ಬಾರಿ ಕರೊನಾ ನೆಗೆಟಿವ್ ಬಂದರೆ ಮಾತ್ರವೇ ಬಿಡುವುದಾಗಿ ಹೇಳಿದ್ದರು. ಈ ಮಧ್ಯೆ ಕುಟುಂಬದವರು ಮಹಿಳೆಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯವಸ್ಥೆ ಮಾಡಿದ್ದರೂ, ಎರಡು ಬಾರಿ ನೆಗೆಟಿವ್ ರಿಪೋರ್ಟ್ ಬಂದರಷ್ಟೇ ಚಿಕಿತ್ಸೆ ನೀಡುತ್ತೇವೆ ಎಂದು ಅವರೂ ನುಣುಚಿಕೊಂಡಿದ್ದರು.
ಎರಡನೇ ಬಾರಿ ತಪಾಸಣೆ ನಡೆಸಿ ನೆಗೆಟಿವ್ ಬಂದ ಬಳಿಕ ಗರ್ಭಿಣಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಪರಿಶೀಲಿಸಿದ ವೈದ್ಯರು ಪರಿಸ್ಥಿತಿ ಗಂಭೀರವಿದ್ದು, ತಾಯಿಯ ಜೀವ ಉಳಿಸಬೇಕಾದರೆ ಬಲವಂತದ ಹೆರಿಗೆ ಮಾಡಿಸಬೇಕಾಗುತ್ತದೆ ಎಂದಿದ್ದಾರೆ. ಆದರೆ ಅದಾಗಲೇ ಮಗು ಹೊಟ್ಟೆಯಲ್ಲೇ ಮಗು ಮೃತಪಟ್ಟಿತ್ತು.
ಅಪಾರ್ಟ್‌ಮೆಂಟ್‌ಗೆ ನೋಟಿಸ್: ಗರ್ಭಿಣಿಗೆ ಪ್ರವೇಶ ನಿರಾಕರಿಸಿದ ಶಿವಭಾಗ್‌ನ ಶಿವದೀಪ್ ಅಪಾರ್ಟ್‌ಮೆಂಟ್‌ಗೆ ಮೂರು ದಿನಗಳ ಒಳಕೆ ಸೂಕ್ತ ಕಾರಣ ನೀಡಲು ಮಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ತಕ್ಷಣ ಮಹಿಳೆಗೆ ತನ್ನ ಫ್ಲಾೃಟ್ ಪ್ರವೇಶಿಸಲು ಅವಕಾಶ ನೀಡಬೇಕು, ತಪ್ಪಿದಲ್ಲಿ ಅಸೋಸಿಯೇಶನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.
ಮಹಿಳೆಯ ಕುಟುಂಬದವರು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ, ಆದರೆ ಲಿಖಿತ ದೂರು ನೀಡಿಲ್ಲ. ಆಸ್ಪತ್ರೆಯವರು ಚಿಕಿತ್ಸೆ ನಿರಾಕರಿಸುವಂತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಆಸ್ಪತ್ರೆಗಳು, ಅಪಾರ್ಟ್‌ಮೆಂಟ್‌ಗಳಿಗೆ ಸಾಮಾನ್ಯ ನಿಯಮಗಳನ್ನು ರೂಪಿಸಿ ಪಾಲಿಸುವಂತೆ ಸೂಚಿಸಲಾಗುವುದು. - ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ