

ಶ್ರೀರಂಗಪಟ್ಟಣ: ಗರ್ಭಿಣಿಯರಿಗೆ ಮಗು ಹಾಗೂ ತಮ್ಮ ಸದೃಢ ಆರೋಗ್ಯಕ್ಕಾಗಿ ಪೌಷ್ಟಿಕಾಂಶದಿಂದ ಕೂಡಿರುವ ಉತ್ತಮ ಆಹಾರಗಳನ್ನೇ ಸೇವಿಸಬೇಕು. ಇಂತಹ ಸ್ತ್ರೀಯರಿಗೆ ರೋಟರಿ ಕ್ಲಬ್ ಪೌಷ್ಟಿಕ ಆಹಾರಗಳ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ರಜನಿ ಹೆಗಡೆ ತಿಳಿಸಿದರು.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಶ್ರೀರಂಗಪಟ್ಟಣ ರೋಟರಿ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಕಿಟ್ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಗರ್ಭ ಧರಿಸಿದ ಸ್ತ್ರೀಯರು ತಮ್ಮ ಹಾಗೂ ಮಗುವಿನ ಆರೋಗ್ಯ ಸಮಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅತ್ಯಂತ ಕ್ರಿಯಾಶೀಲರಾಗಿರಬೇಕು. ತರಕಾರಿ, ಹಣ್ಣು ಮತ್ತು ಪೌಷ್ಟಿಕಾಂಶದಿಂದ ಕೂಡಿರುವಂತಹ ಆಹಾರಗಳನ್ನು ಸೇವಿಸುವ ಜತೆಗೆ ದಿನನಿತ್ಯ ನಿಗಧಿತ ಸಮಯದಲ್ಲಿ ವ್ಯಾಯಾಮವನ್ನು ಮಾಡಬೇಕು. ಮಳೆ ಮತ್ತು ಚಳಿಗಾಲದ ಸಮಯದಲ್ಲಿ ಆರೋಗ್ಯ ಸುಧಾರಣೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಅರಿವು ಮೂಡಿಸಿದರು.
ಪುರಸಭೆ ಮಾಜಿ ಸದಸ್ಯೆ ಕಾವೇರಮ್ಮ ಕಾರ್ಯಕ್ರಮದ ಉದ್ಘಾಟಿಸಿದರು. ಕಿರಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ರೋಟರಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಮಂಜುರಾಮ್ ಪುಟ್ಟೇಗೌಡ, ಪಿಡಿಒ ಪ್ರಶಾಂತ್ ಬಾಬು, ರೋಟರಿ ಅಧ್ಯಕ್ಷ ಡಾ.ರಾಘವೇಂದ್ರ, ಗೌರವ ಕಾರ್ಯದರ್ಶಿ ಎನ್.ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ನಿರ್ದೇಶಕ ಶ್ರೀಧರ್,ಅಂಗನವಾಡಿ ಕಾರ್ಯಕರ್ತೆ ಆಶಾ, ಧನಲಕ್ಷ್ಮೀ. ನಂದಿನಿ, ಛಾಯಾ ಇತರರು ಉಪಸ್ಥಿತರಿದ್ದರು.