ಅಧಿಕ ರಕ್ತಸ್ರಾವ, ಬಾಣಂತಿ ಮೃತ್ಯು

chandrakala
Published on

ಈಶ್ವರಮಂಗಲ: ಹೆರಿಗೆ ವೇಳೆ ಅಧಿಕ ರಕ್ತಸ್ರಾವಕ್ಕೊಳಗಾಗಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕರ ಪತ್ನಿ ಚಂದ್ರಕಲಾ(25) ಮೃತಪಟ್ಟ ಗೃಹಿಣಿ.

ಚಂದ್ರಕಲಾಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೆರಿಗೆ ವೇಳೆ ವಿಪರೀತ ರಕ್ತಸ್ರಾವ ಉಂಟಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನವಜಾತ ಶಿಶು ಆರೋಗ್ಯದಿಂದಿದೆ. ಚಂದ್ರಕಲಾ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಸುಬ್ಬಣ್ಣ ನಾಯ್ಕ ಅವರ ಪುತ್ರಿ.

ಒಂದೂವರೆ ವರ್ಷದ ಹಿಂದೆ ಅರಿಯಡ್ಕ ಗ್ರಾಮದ ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕ ಜತೆ ಅವರ ವಿವಾಹವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net