

ಬಳ್ಳಾರಿ: ಜಿಲ್ಲೆಯಲ್ಲಿ ಅತಿಹೆಚ್ಚು ಸಂಖ್ಯೆ ಗರ್ಭಿಣಿಯರಲ್ಲಿ ಎಚ್‌ಐವಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಪ್ರಸಕ್ತ ವರ್ಷ ರಾಜ್ಯದಲ್ಲಿ ಬಳ್ಳಾರಿ ಮೊದಲ ಸ್ಥಾನ ಪಡೆದಿದೆ ಎಂದು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಕಳವಳ ವ್ಯಕ್ತಪಡಿಸಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯ ಎಚ್‌ಐವಿ ತಪಾಸಣೆ ವೇಳೆ ಕಂಡು ಬಂದ ಪ್ರಕರಣಗಳಲ್ಲಿ ಬಳ್ಳಾರಿಗೆ ರಾಜ್ಯದಲ್ಲಿ 13ನೇ ಸ್ಥಾನವಿದೆ. ಆದರೆ, ಗರ್ಭಿಣಿಯರ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ 30 ಗರ್ಭಿಣಿಯರಿಗೆ ಸೋಂಕು ತಗುಲಿದೆ. 2017 ರಿಂದ 2021ರ ವರೆಗೆ ಜಿಲ್ಲೆಯಲ್ಲಿ 4,59,034 ಜನರು ಐಸಿಟಿಸಿ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇವರಲ್ಲಿ 1,782 ಜನರಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 624 ಸೋಂಕಿತರು ಮರಣ ಹೊಂದಿದ್ದು, 1,339 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಹೊರ ಜಿಲ್ಲೆಯ ಎಂಟು ಜನ ಸೇರಿದಂತೆ 594 ಪುರುಷರು, 737 ಮಹಿಳೆಯರು, 20 ತೃತೀಯ ಲಿಂಗಿಗಳು, 77 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಸೋಂಕಿತ ಗರ್ಭಿಣಿಯರಿಗೆ ಜನಿಸಿದ ಮಕ್ಕಳಿಗೆ ಆರು ವಾರ, ಆರು ತಿಂಗಳು, 12 ತಿಂಗಳು ಮತ್ತು 18 ತಿಂಗಳ ಅನುಸರಣೆ ಮಾಡಿ ಡಿಬಿಎಸ್ ಪರೀಕ್ಷೆಯನ್ನು ಐಸಿಟಿಸಿ ಕೇಂದ್ರಗಳಲ್ಲಿ ಮಾಡುತ್ತಾರೆ. ಇದರಿಂದ ಮಕ್ಕಳಲ್ಲಿ ಸೋಂಕು ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪತ್ತೆಹಚ್ಚಬಹುದಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 10 ಇಐಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಈ ಕೇಂದ್ರಗಳಲ್ಲಿ 2017 ರಿಂದ 2021 ಅಕ್ಟೋಬರ್‌ವರೆಗೆ 166 ಮಕ್ಕಳಿಗೆ ಡಿಬಿಎಸ್ ಪರೀಕ್ಷೆ ಮಾಡಿಸಲಾಗಿದೆ. ಇವರಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.
2020-21ನೇ ಸಾಲಿನ ವಿಶೇಷ ಪಾಲನಾ ಯೋಜನೆಯಡಿ ಜಿಲ್ಲೆಯಲ್ಲಿನ ಸೋಂಕಿತ ಮತ್ತು ಬಾಧಿತ ಪ್ರತಿ ಮಗುವಿಗೆ ಒಂದು ಸಾವಿರ ರೂ.ಯಂತೆ ಒಟ್ಟು 33.60 ಲಕ್ಷ ರೂ. ಪಾವತಿಸಲಾಗಿದೆ. 2021-22ನೇ ಸಾಲಿನ ಅನುದಾನ ನೇರವಾಗಿ ಸರ್ಕಾರ ಮಕ್ಕಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಇಲಾಖೆಗೆ ಬಿಡುಗಡೆಯಾಗಿಲ್ಲ.| ರಾಜನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬಳ್ಳಾರಿ