

ಮಡಿಕೇರಿ: ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಮಹಿಳೆಯರಿಗೆ ಆದ್ಯತೆ ನೀಡಿದ್ದು ರೋಟರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದಸ್ಯೆಯರಾಗಿ ಸೇರ್ಪಡೆಯಾಗುತ್ತಿರುವುದು ಮಹತ್ವದ ವಿಚಾರವಾಗಿದೆ ಎಂದು ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪ್ರಕಾಶ್ ಕಾರಂತ್ ಶ್ಲಾಘಿಸಿದರು.
ಮಡಿಕೇರಿ ರೋಟರಿ ವುಡ್ಸ್‌ಗೆ ಮಂಗಳವಾರ ಅಧಿಕೃತ ಭೇಟಿ ನೀಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಪೂರ್ಣತೆಯತ್ತ ಸಾಗಲು ಕಾಲದಿಂದ ಕಾಲಕ್ಕೆ ಬದಲಾವಣೆ ಅಗತ್ಯ. ರೋಟರಿಯು ಸದಾ ಬದಲಾವಣೆಗಳಿಗೆ ತಕ್ಕಂತೆ ತನ್ನ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಮಹಿಳಾ ಸದಸ್ಯರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡುತ್ತಾ ಮಹಿಳೆಯರಿಗೂ ಸೂಕ್ತ ಅವಕಾಶ ಕಲ್ಪಿಸುತ್ತಾ ಬಂದಿದೆ. ರೋಟರಿಗೆ ೧೧೭ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೆನಿಫರ್ ಜೋನ್ಸ್ ಎಂಬ ಮಹಿಳೆಯೇ ಅಂತರರಾಷ್ಟ್ರೀಯ ಅಧ್ಯಕ್ಷೆಯಾಗಿ ನೇಮಕವಾಗಿ ಅತ್ಯಂತ ಸಶಕ್ತವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮಹಿಳೆಯರ ಸಮಾನ ಹಕ್ಕುಗಳಿಗೆ ರೋಟರಿ ಮನ್ನಣೆ ನೀಡಿದೆ ಎಂದರು.
ಶೇ.೩೦ ರಷ್ಟು ಮಹಿಳಾ ಸದಸ್ಯೆಯರನ್ನು ಪ್ರತಿ ರೋಟರಿ ಸಂಸ್ಥೆಗಳೂ ಸೇರ್ಪಡೆಗೊಳಿಸುವ ಹೊಣೆಗಾರಿಕೆ ಹೊಂದಿದೆ. ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಗೆ ಸೇರ್ಪಡೆಯಾಗಲು ಮಹಿಳೆಯರೂ ಮುಂದೆ ಬರಬೇಕು ಎಂದು ಕಾರಂತ್ ಕರೆ ನೀಡಿದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ ಮಾತನಾಡಿ, ರೋಟರಿಯ ಜಿಲ್ಲಾ ಯೋಜನೆಗಳಾದ ವನಸಿರಿ, ಆರೋಗ್ಯ ಸಿರಿ, ಜಲಸಿರಿ, ವಿದ್ಯಾಸಿರಿಗಳನ್ನು ಯಶಸ್ವಿಯಾಗಿ ರೋಟರಿ ವುಡ್ಸ್ ಅಳವಡಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್ ಮಾತನಾಡಿ, ಮಡಿಕೇರಿಯಲ್ಲಿ ೩ನೇ ರೋಟರಿ ಸಂಸ್ಥೆಯಾಗಿ ಉದಯಿಸಿದ ರೋಟರಿ ವುಡ್ಸ್ ಸದಸ್ಯರೆಲ್ಲರ ಸಹಕಾರದೊಂದಿಗೆ ಅನೇಕ ಜನೋಪಯೋಗಿ ಯೋಜನೆಗಳನ್ನು ಕೈಗೊಂಡಿದೆ. ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಆದ್ಯತೆ ನೀಡಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ವುಡ್ಸ್ ಮಡಿಕೇರಿ ವತಿಯಿಂದ ಸೇವಾ ಸಾಧನೆಗಾಗಿ ಮಡಿಕೇರಿಯ ಹಿರಿಯ ವೈದ್ಯ ಡಾ.ಕೆ.ಬಿ.ಸೂರ್ಯಕುಮಾರ್ ಮತ್ತು ತೋಟಗಾರಿಕೆ ಇಲಾಖಾಧಿಕಾರಿ ಪ್ರಮೋದ್ ಕುಮಾರ್‌ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರೋಟರಿ ವಲಯ ಸೇನಾನಿ ಎನ್.ಡಿ.ಅಚ್ಚಯ್ಯ, ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ವೇದಿಕೆಯಲ್ಲಿದ್ದರು.