

ಬೆಂಗಳೂರು ಗ್ರಾಮಾಂತರ: ಶೀಘ್ರದಲ್ಲೆ ಕರೊನಾ ಲಸಿಕೆ ಲಭ್ಯವಾಗಲಿದ್ದು, ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ಕರೊನಾ ಲಸಿಕೆ ಪರಿಚಯ ಕುರಿತ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕರೊನಾ ನಿಯಂತ್ರಣದಲ್ಲಿ ವೈದ್ಯಕೀಯ ಸಿಬ್ಬಂದಿ ಸೇವೆ ಅನನ್ಯವಾಗಿದೆ, ವೈದ್ಯಕೀಯ ಸಿಬ್ಬಂದಿಗೆ ಆದ್ಯತೆ ಮೇರೆಗೆ ಕರೊನಾ ಲಸಿಕೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಹಂತ ಹಂತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಎರಡನೇ ಆದ್ಯತೆಯಲ್ಲಿ ಕರೊನಾ ಲಸಿಕೆ ನೀಡಲಾಗುವುದು, ಕೇಂದ್ರ ಸರ್ಕಾರದ ಸೂಚನೆಯಂತೆ ಕರೊನಾ ಲಸಿಕೆ ಮೊದಲಿಗೆ ವೈದ್ಯಕೀಯ ಸಿಬ್ಬಂದಿಗೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಅರಿವು: ಸಾರ್ವಜನಿಕರಿಗೆ ಕರೊನಾ ಲಸಿಕೆ ಕುರಿತು ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವೈದ್ಯರಿಗೆ, ಸಿಬ್ಬಂದಿಗೆ ತರಬೇತಿ ಅವಶ್ಯಕತೆ ಇರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ನೀಡಲಾಗುವ ಪೂರ್ಣ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ತಲುಪಿಸಲು ವೈದ್ಯಕೀಯ ಸಿಬ್ಬಂದಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಲಸಿಕೆ ಲಭ್ಯವಾದರೂ ಕರೊನಾ ನಿಯಮಗಳನ್ನು ಉಲ್ಲಂಸುವಂತಿಲ್ಲ. ಲಸಿಕೆ ನೀಡಲು ಬೇಕಾದ ಸಿದ್ಧತೆ ನಡೆಯುತ್ತಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಸೇರಿ ಇನ್ನಿತರೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಡಿಸಿ ಹೇಳಿದರು.
ಮಾರ್ಗದರ್ಶನದಂತೆ ಲಸಿಕೆ: ಡಬ್ಲ್ಯುಎಚ್ ಪ್ರತಿನಿಧಿ ಸರ್ವೇಲೇನ್ಸ್ ಮೆಡಿಕಲ್ ಅಧಿಕಾರಿ ನಾಗರಾಜು ಮಾತನಾಡಿ, ನ್ಯಾಷನಲ್ ಎಕ್ಸ್‌ಫರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಶನ್ ಮಾರ್ಗದರ್ಶನದಂತೆ ಕರೊನಾ ಲಸಿಕೆ ನೀಡಬೇಕಾಗುತ್ತದೆ. ಮೊದಲ ಆದ್ಯತೆ ವೈದ್ಯರಿಗೆ, ನಂತರದಲ್ಲಿ ಪೋಲಿಸ್ ಇಲಾಖೆ, ಹೋಮ್‌ಗಾರ್ಡ್ಸ್, ಮುನ್ಸಿಪಾಲ್ ವರ್ಕರ್ಸ್, 50 ಮೇಲ್ಪಟ್ಟವರಿಗೆ ನೀಡಬೇಕೆಂಬ ಸೂಚನೆ ಇದೆ ಎಂದರು. ಹಾಗೆಯೇ ಲಸಿಕೆ ಸಂಗ್ರಹ ಮತ್ತು ರೋಗಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.