ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಆದ್ಯತೆ, ಬಿಜೆಪಿ ನಗರಾಧ್ಯಕ್ಷ ಶಿವಶಂಕರ್ ಅಭಿಮತ, ದೊಡ್ಡಬಳ್ಳಾಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ

11dbp3(Health Program)
Published on

ದೊಡ್ಡಬಳ್ಳಾಪುರ: ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ಇಂದಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿಯಾಗಲಿವೆ ಎಂದು ಬಿಜೆಪಿ ನಗರಾಧ್ಯಕ್ಷ ಶಿವಶಂಕರ್ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಅರ್ಪಿತಾ ಸೇವಾ ಟ್ರಸ್ಟ್, ಸಪ್ತಗಿರಿ ಆಸ್ಪತ್ರೆ ಹಾಗೂ ನಗರ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆಗಳಿಗೆ ಅಲೆದಾಡುವುದು, ಮುಂತಾದ ಸಂಕಷ್ಟಗಳಿಂದ ಪಾರಾಗಬಹುದು. ಹಳ್ಳಿಗಳಲ್ಲೂ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದರು.

ಬಿಜೆಪಿ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಉತ್ತಮ ಆರೋಗ್ಯ ಇದ್ದರೆ ಸುಖವಾಗಿ ಬಾಳಬಹುದು. ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಬದಲು ಕಾಯಿಲೆ ಬರದಂತೆ ತಡೆಯುವುದು ಜಾಣತನ ಎಂದರು.

ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಉಚಿತ ಆರೋಗ್ಯ ತಪಾಸಣೆ ಮಾಡಿದರು. ಶಿಬಿರದಲ್ಲಿ ಪ್ರಸೂತಿ ಮತ್ತು ಸೀರೋಗ, ಮಕ್ಕಳ ರೋಗ, ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಯಿತು. 150ಕ್ಕೂ ಅಧಿಕ ಮಂದಿ ವಿವಿಧ ಸಮಸ್ಯೆಗಳಿಗೆ ತಪಾಸಣೆಗೊಳಗಾದರು. ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ವತ್ಸಲಾ, ಮುಖಂಡರಾದ ಲಗ್ಗೆರೆ ನಾರಾಯಣಸ್ವಾಮಿ, ಶಿವು, ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net