

ವಿಜಯಪುರ : ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಂತಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಅಹಿತಕ ಘಟನೆ ನಡೆಯದ ಹಾಗೆ ಮುಂಜಾಗ್ರತೆ ವಹಿಸಬೇಕು. ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.
ಗಣೇಶ ಮಂಟಪ ನಿರ್ಮಿಸಲು ಮಹಾನಗರ ಪಾಲಿಕೆ, ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ, ಪೆಂಡಾಲ್‌ಗೆ ಲೋಕೋಪಯೋಗಿ, ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಗಣೇಶ ಮಂಟಪಗಳಲ್ಲಿ ಅಶ್ಲೀಲ ಚಿತ್ರಗೀತೆಗಳು, ಕೋಮುಭಾವನೆ ಕೆರಳಿಸುವ ಹಾಡು ಮತ್ತು ಭಾಷಣ ಬಿತ್ತರಿಸಬಾರದು. ಗಣೇಶ ಮಂಟಪದಲ್ಲಿ ಅಥವಾ ಮೆರವಣಿಗೆಯಲ್ಲಿ ಕೋಮು ಪ್ರಚೋದಿತ, ಭಿತ್ತಿ ಪತ್ರ, ಬ್ಯಾನರ್, ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಬಾರದು. ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದ ಸಮಯದಲ್ಲಿ ಮಂಟಪದಲ್ಲಿ ಕನಿಷ್ಠ ಪ್ರಮಾಣದ ಬೆಂಕಿ ನಂದಿಸುವ ಅಗ್ನಿ ಶಾಮಕ ಉಪಕರಣಗಳು, ನೀರು, ಮರಳು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಎಸ್ಪಿ ಎಚ್.ಡಿ. ಆನಂದಕುಮಾರ ಮಾತನಾಡಿ, ಜಿಲ್ಲೆ ಸೌಹಾರ್ದಕ್ಕೆ ಹೆಸರಾಗಿದೆ. ಇದನ್ನು ನಾವು ಉಳಿಸಿಕೊಂಡು ಹೋಗೋಣ. ಈ ಹಬ್ಬದ ಉದ್ದೇಶವೇ ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವುದಾಗಿದೆ. ನಮ್ಮೆಲ್ಲರ ಸಂರಕ್ಷಣೆ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಕೆಲವು ನೀತಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಮನವಿ ಮಾಡಿದರು.
ಗಣೇಶ ಮೂರ್ತಿಯ ಮೆರವಣಿಗೆಯನ್ನು ಪೊಲೀಸರಿಂದ ಅನುಮತಿ ಪಡೆದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಕೊಂಡೊಯ್ಯಬಾರದು. ಮೆರವಣಿಗೆ ಸಮಯದಲ್ಲಿ ಕರ್ಕಶವಾದ ವಾದ್ಯಗಳು, ಬೆಂಕಿ ಆಟಗಳನ್ನು ಪ್ರದರ್ಶಿಸಬಾರದು ಎಂದು ತಿಳಿಸಿದರು.
ಗಣೇಶ ಮಂಟಪದಲ್ಲಿ ಸಮೀಪದ ಪೊಲೀಸ್ ಠಾಣೆ, ಹೆಸ್ಕಾಂ, ಅಗ್ನಿಶಾಮಕ ಠಾಣೆ, ಸಂಘಟನೆಕಾರ ಪದಾಧಿಕಾರಿಗಳ ಮೊಬೈಲ್ ನಂಬರ್ ಹೊಂದಿರುವ ಫಲಕವನ್ನು ತೂಗು ಹಾಕಬೇಕು. ಗಣೇಶ ಮೂರ್ತಿ ವೀಕ್ಷಿಸಲು ಬರುವ ಸಾರ್ವಜನಿಕರಿಂದ, ಭಕ್ತಾದಿಗಳಿಂದ ಒತ್ತಾಯವಾಗಿ ಚಂದಾ ವಸೂಲಿ, ಪ್ರವೇಶ ಶುಲ್ಕ, ಲಾಟರಿ ಮೂಲಕ ಹಣ ಪಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೃತಕ ಹೊಂಡ ನಿರ್ಮಾಣ: ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮಾತನಾಡಿ, ಅವಕಾಶವಿರುವ ಎಲ್ಲ ಕಡೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಲಾಗುವುದು. ಜನರ ಬೇಡಿಕೆಯಂತೆ, ತಗ್ಗು ಗುಂಡಿ ಬಿದ್ದಿರುವ ನಗರದಲ್ಲಿನ ಕೆಲವು ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಬೀದಿ ದೀಪಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಎಎಸ್ಪಿ ರಾಮ ಅರಸಿದ್ದಿ, ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಮತ್ತಿತರರಿದ್ದರು.