

ವಿಜಯವಾಣಿ ವಿಶೇಷ ಅಳವಂಡಿ
ತಲೆ ತಗ್ಗಿಸಿ ಪುಸ್ತಕ ಓದಿದರೆ, ಭವಿಷ್ಯದಲ್ಲಿ ತಲೆ ಎತ್ತಿ ತಿರುಗಬಹುದೆನ್ನುವ ಮಾತಿದೆ. ಈ ನಿಟ್ಟಿನಲ್ಲಿ ಬೆಟಗೇರಿ ಪ್ರೌಢಶಾಲೆ ಮಾದರಿ ಗ್ರಂಥಾಲಯ ಸ್ಥಾಪನೆ ಮಾಡುವ ಮೂಲಕ, ಮಕ್ಕಳನ್ನು ಗ್ರಂಥಾಲಯದತ್ತ ಸೆಳೆಯುವ ಜತೆಗೆ ಅವರಲ್ಲಿ ಅಕ್ಷರ ಜ್ಞಾನ ಬಿತ್ತುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ.
ಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರೆಗೂ 283 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳಲ್ಲಿ ಪಠ್ಯ ಪುಸ್ತಕದ ಜತೆಗೆ ಇತರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವ ಹಾಗೂ ಗ್ರಂಥಾಲಯದ ಉಪಯೋಗ ಹಾಗೂ ಪುಸ್ತಕಗಳ ಓದಿನಿಂದಾಗುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶಾಲೆಯಲ್ಲಿ ಆಗುತ್ತಿದೆ.
ಶಿಕ್ಷಕರು ಸಹ ಮಕ್ಕಳಿಗೆ ಗ್ರಂಥಾಲಯದಲ್ಲಿ ಪುಸ್ತಕಗಳ ಬಳಕೆ ಹಾಗೂ ಅವುಗಳಿಂದಾಗುವ ಉಪಯೋಗದ ಕುರಿತು ಮಾಹಿತಿ ನೀಡುತ್ತಿದ್ದಾರೆ. ವಿಷಯವಾರು ಪುಸ್ತಕಗಳ ಜೋಡಣೆ ಹಾಗೂ ಬೇಕಾದ ಪುಸ್ತಕಗಳು ಸಲೀಸಾಗಿ ಸಿಗುವಂತೆ ವ್ಯವಸ್ಥೆ ಮಾಡಿ ಗ್ರಂಥಾಲಯದ ಅಂದ ಹೆಚ್ಚಿಸಿದ್ದಾರೆ. ಮಕ್ಕಳ ಅಧ್ಯಯನಕ್ಕೆ ಆಸನ ವ್ಯವಸ್ಥೆ ಮಾಡಿದ್ದಾರೆ.
ಈ ಶಾಲೆ ಮಾದರಿ ಶಾಲೆಯಾಗಿ ಆಯ್ಕೆಯಾಗಿದ್ದು, ಲೈಬ್ರರಿಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಸುಮಾರು 4000 ಸಾವಿರ ಪುಸ್ತಕಗಳ ಸಂಗ್ರಹವಿದೆ. ಜಿಲ್ಲಾ ಪಂಚಾಯಿತಿ, ಶಾಲಾ ಅನುದಾನ ಹಾಗೂ ಇತರ ಮೂಲಗಳಿಂದ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಗ್ರಂಥಾಲಯದ ಗೋಡೆಯ ಮೇಲೆ ಸಾಹಿತಿಗಳು, ಸ್ವಾತಂತ್ರೃ ಹೋರಾಟಗಾರರು ಹಾಗೂ ಇತರ ಸಾಧಕರ ಭಾವಚಿತ್ರಗಳನ್ನು ಹಾಕಲಾಗಿದ್ದು, ವಿದ್ಯಾರ್ಥಿಗಳ ಮನಸೆಳೆಯುವಂತಿದೆ.
ವಾರಕ್ಕೆ ಒಂದು ಅವಧಿಯಂತೆ ವಿದ್ಯಾರ್ಥಿಗಳು 40 ನಿಮಿಷ ಪುಸ್ತಕ ಓದುತ್ತಾರೆ. ಪುಸ್ತಕ ಓದಿದ ನಂತರ ಅದರಲ್ಲಿ ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಾರೆ ಹಾಗೂ ಪ್ರತಿ ವಿದ್ಯಾರ್ಥಿಗೂ ಒಂದು ಪುಸ್ತಕವನ್ನು ಓದಲು 8 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ಸುಶ್ಮಿತಾ, ಶಿರಸಪ್ಪ, ನಿರ್ಮಲಾ, ಪ್ರಕಾಶರಡ್ಡಿ, ರಾಜೇಸಾಬ್, ತುಕಾರಾಮ್, ಸುರೇಶ, ನಾರಾಯಣಪ್ಪ ಇವರ ಸಹಕಾರದಿಂದ ಮಾದರಿ ಗ್ರಂಥಾಲಯ ನಿರ್ಮಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಗ್ರಂಥಾಲಯದ ಮಹತ್ವವನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಮಾದರಿ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಸರ್ವರ ಸಹಕಾರವೂ ಇದೆ.ಶಿರಸಪ್ಪ ಗಡಾದ, ಶಿಕ್ಷಕ ಹಾಗೂ ಗ್ರಂಥಪಾಲಕ
ಗ್ರಾಮೀಣ ಭಾಗದ ಮಕ್ಕಳ ಅಧ್ಯಯನಕ್ಕೆ ಎಲ್ಲ ರೀತಿಯ ಪುಸ್ತಕಗಳು ಸಿಗಲೆಂದು ಹಾಗೂ ಪುಸ್ತಕಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಸರ್ವ ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮಾದರಿ ಗ್ರಂಥಾಲಯ ಸ್ಥಾಪಿಸಲಾಗಿದೆ.ಪರಶುರಾಮ ಸಾಲ್ಮನಿ, ಮುಖ್ಯ ಶಿಕ್ಷಕ
ನಮ್ಮ ಶಾಲೆಯಲ್ಲಿ ಪಠ್ಯದ ಜತೆಗೆ, ಅದಕ್ಕೆ ಬೇಕಾದ ಪೂರಕ ವಿಷಯಗಳನ್ನು ತಿಳಿದುಕೊಳ್ಳಲು ಗ್ರಂಥಾಲಯ ಸಹಕಾರಿಯಾಗಿದೆ. ಓದಲು ಒಳ್ಳೆಯ ವಾತಾವರಣ ಶಾಲೆಯಲ್ಲಿದೆ.ಪಲ್ಲವಿ ಮತ್ತೂರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ
ನಮ್ಮ ಶಾಲೆಯಲ್ಲಿನ ಗ್ರಂಥಾಲಯದಲ್ಲಿ ಸಾಮಾನ್ಯ ಜ್ಞಾನ ಪುಸ್ತಕಗಳು ಲಭ್ಯವಿವೆ. ಇವುಗಳ ಅಧ್ಯಯನದಿಂದ ಮುಂದೆ ಬರಬಹುದಾದ ಸ್ಪರ್ದಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗಿವೆ.ಕೀರ್ತಿ ಹಳ್ಯಾಳ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ