

ಬೆಂಗಳೂರು ಗ್ರಾಮಾಂತರ: ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣಗಳು ರಾಕೆಟ್‌ಗಿಂತ ವೇಗವಾಗಿ ಸಂಚಲನ ಮೂಡಿಸುತ್ತಿವೆ, ಕ್ಷಣಾರ್ಧದಲ್ಲಿ ಎಲ್ಲರ ಬೆರಳ ತುದಿಯಲ್ಲಿ ಮಾಹಿತಿ ಸ್ಫೋಟಿಸುವ ಮಹತ್ತರ ಜಾಲವಾಗಿದೆ, ಇಂಥ ಸಾಮಾಜಿಕ ಜಾಲತಾಣ ಕಟ್ಟಡ ಕಾರ್ಮಿಕರ ಹೆಣ್ಣುಮಗುವಿಗೆ ಉಚಿತವಾಗಿ ಕಾಲೇಜುವರೆಗಿನ ಶಿಕ್ಷಣ ದೊರಕಿಸಿಕೊಡುವಂತೆ ಮಾಡಿದೆ.
ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ನೆಲಮಂಗಲದ ಎಚ್.ವೆಂಕಟೇಶ್ ದೊಡ್ಡೇರಿ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಷಯವೊಂದು ಹೆಣ್ಣುಮಗುವಿನ ಸಂಪೂರ್ಣ ಉಚಿತ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ.
ಯಾದಗಿರಿಯ ಮಾಲ್ ರೋಜಾ ಗ್ರಾಮದ ಶಾಣಪ್ಪ ಹಾಗೂ ಜಯಲಕ್ಷ್ಮೀ ದಂಪತಿ 2 ವರ್ಷದ ಹಿಂದೆ, ಹೆಣ್ಣು ಮಗುವಿನೊಂದಿಗೆ ಬೆಂಗಳೂರಿಗೆ ಬಂದು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ದೊಡ್ಡೇರಿ ಅವರು ಬೆಂಗಳೂರಿನಲ್ಲಿ ಇತ್ತೀಚಿಗೆ ವಾಯುವಿಹಾರಕ್ಕೆ ಹೋಗುತ್ತಿದ್ದಾಗ ದಂಪತಿ ಕಟ್ಟಡ ನಿರ್ಮಾಣದಲ್ಲಿ ಭಾಗಿಯಾಗಿದ್ದು, ಹೆಣ್ಣು ಮಗು ರಸ್ತೆ ಬದಿ ಅಟವಾಡುತ್ತಿದ್ದ ದೃಶ್ಯ ಗಮನಿಸಿದ್ದರು. ಕೂಡಲೇ ಶಾಣಪ್ಪ ಕುಟುಂಬದ ಜತೆ ಮಾತನಾಡಿ, ಹೆಣ್ಣು ಮಗುವಿನ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಶಿಕ್ಷಣ ನೀಡಲು ಮುಂದೆ ಬಂದ ಸಂಸ್ಥೆ: ಈ ವಿಷಯ ಗಮನಿಸಿದ ನೆಲಮಂಗಲದ ಹರ್ಷ ಇಂಟರ್ ನ್ಯಾಷನಲ್ ಸ್ಕೂಲ್ ಮಾಲೀಕ ಶಿವಕುಮಾರ್ ತಮ್ಮ ಸಂಸ್ಥೆಯಲ್ಲಿ ಆ ಹೆಣ್ಣು ಮಗುವಿಗೆ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲು ಮನಸ್ಸು ಮಾಡಿ ಆ ವಿಷಯವನ್ನು ದೊಡ್ಡೇರಿ ವೆಂಕಟೇಶರಿಗೆ ತಿಳಿಸಿದರು. ಇದರ ಲವಾಗಿ ಶಿಕ್ಷಣದಿಂದ ವಂಚಿತವಾಗುತ್ತಿದ್ದ ಹೆಣ್ಣು ಮಗುವೊಂದಕ್ಕೆ ಉತ್ತಮ ಭವಿಷ್ಯ ದೊರಕಿದಂತಾಗಿದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ಸಾಮಾಜದಲ್ಲಿನ ಬಾಲ ಕಾರ್ಮಿಕ, ಬಾಲ್ಯ ವಿವಾಹ, ಜೀತ ಪದ್ಧತಿ ನಿರ್ಮೂಲನೆಗೆ ಪ್ರಜ್ಞಾವಂತರು ಮುಂದೆ ಬರಬೇಕು, ಬಡ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಮಕ್ಕಳ ಭವಿಷ್ಯಕ್ಕೆ ಆಧಾರವಾಗಬೇಕು. ಈ ವರ್ಷ ದೊಡ್ಡೇರಿ ಪ್ರತಿಷ್ಠಾನದಿಂದ 25 ಮಕ್ಕಳನ್ನು ಗುರುತಿಸಿದ್ದು, ಆ ಮಕ್ಕಳಿಗೆ ಉತ್ತಮ ಜೀವನ ಕಲ್ಪಿಸುವ ಪ್ರಯತ್ನ ನಡೆದಿದೆ. ಎಚ್.ವೆಂಕಟೇಶ್ ದೊಡ್ಡೇರಿ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತ