

ಕಾರಟಗಿ: ತಾಲೂಕು ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನ ಮಾಡಿರುವ ಕೆಲಸಗಳು ಅಧ್ವಾನಗೊಂಡಿವೆ.
ಸರ್ಕಾರ ಗ್ರಾಮೀಣ ಭಾಗದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳನ್ನು ವಿವಿಧ ವಿಭಾಗಗಳಿಂದ ಅನುಷ್ಠಾನಗೊಳಿಸುತ್ತಿದೆ. ಇನ್ನು ತಾಲೂಕು ವ್ಯಾಪ್ತಿಯಲ್ಲಿ ಪಿಆರ್‌ಇಡಿ ಕೆಲಸಗಳು ತೀರಾ ಗೊಂದಲಮಯವಾಗಿವೆ. ಕೆಲವೊಂದು ಕಾಮಗಾರಿಗಳು ಇತರ ಇಲಾಖೆ ಅನುಷ್ಠಾನ ಮಾಡಿದರೂ ಪಿಆರ್‌ಇಡಿ ಇಲಾಖೆ ಕೂಡ ಅನುಷ್ಠಾನ ಮಾಡಿ ಬಿಲ್ ಎತ್ತುವಳಿ ಮಾಡಿರುವ ಉದಾಹರಣೆ ಕಾಣಸಿಗುತ್ತಿವೆ. ಇನ್ನೂ ಕೆಲ ಪ್ರಕರಣಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ಪ್ರತಿ ನೀಡಿದ್ದರೂ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಲಕ್ಷಾಂತರ ರೂ. ವೆಚ್ಚದ ಕಾಮಗಾರಿ ಮಾಡಿರುವುದು ದುರಂತವಾಗಿದೆ.
ಪಿಆರ್‌ಇಡಿಯಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಡಾಂಬರ್ ರಸ್ತೆ ಕಾಮಗಾರಿ ಕೆಲ ತಿಂಗಳಲ್ಲಿ ಕಿತ್ತು ಹದೆಗಟ್ಟಿದೆ. ಇನ್ನು ಕಾಮಗಾರಿ ಸಂಬಂಧ ಗೊಂದಲ ಪರಿಹಾರಕ್ಕೆ ಪಿಆರ್‌ಇಡಿ ಇಲಾಖೆಗೆ ಕೃಷಿ ಇಲಾಖೆ ಅಧಿಕಾರಿ ಬರೆದ ಪತ್ರಕ್ಕೆ ಈವರೆಗೆ ಸೂಕ್ತ ಉತ್ತರ ಬಾರದಿರುವುದು ಸೋಜಿಗದ ಸಂಗತಿಯಾಗಿದೆ.
ಪ್ರಕರಣ 1
ಬಿಲ್ ಎತ್ತುವಳಿ!
ತಾಲೂಕಿನ ಬೂದಗುಂಪಾ ಹಾಗೂ ಉಳೇನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ 2021-22ನೇ ಸಾಲಿನಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಕಾರ್ಯ ನಡೆದಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಪೆನಾಲ್ಟಿ ಕಟ್ಟಿ ಪ್ರಸ್ತುತದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಇದೇ ಕಾಮಗಾರಿಗೆ ಪಿಆರ್‌ಇಡಿ ಯಿಂದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಲಮ್ ಸಮ್) ಅಡಿ 2024 ಡಿಸೆಂಬರ್‌ನಲ್ಲಿ ಉಳೇನೂರಿನಿಂದ ಬೂದಗುಂಪಾವರೆಗೆ ಆಯ್ದ ಕಡೆಗಳಲ್ಲಿ ರಸ್ತೆ ನಿರ್ಮಾಣ ಹಾಗೂ ದುರಸ್ತಿಗಾಗಿ 4.68 ಲಕ್ಷ ರೂ. ಬಿಲ್ ಎತ್ತುವಳಿ ಮಾಡಲಾಗಿದೆ. ಇತರ ಯೋಜನೆಯಡಿ ಮಾಡಿರುವ ಕಾಮಗಾರಿಗೆ ಮತ್ತೊಂದು ಯೋಜನೆಯಡಿ ತೆಗೆದುಕೊಂಡು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎನ್ನುವ ಸರ್ಕಾರದ ಮಾರ್ಗಸೂಚಿಯಿದ್ದರೂ ಬಿಲ್ ಎತ್ತುವಳಿ ಮಾಡಲಾಗಿದೆ.
ಪ್ರಕರಣ 2 ಅನುಮಾನಕ್ಕೆ ಎಡೆ ತಾಲೂಕಿನ ಸಿದ್ದಾಪುರದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಪಿಆರ್‌ಇಡಿ ಇಲಾಖೆಯಿಂದ ಕೃಷಿ ಸಂಜೀವಿನಿ ಶೆಡ್ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಸ್ವತಃ ಪಿಆರ್‌ಇಡಿ ಇಲಾಖೆ ಎಇಇ ವಿಜಯಕುಮಾರ್ ಈವರೆಗೆ ಶೆಡ್ ನಿರ್ಮಾಣಕ್ಕೆ ಯಾರಿಗೂ ನಮ್ಮ ಕಚೇರಿಯಿಂದ ಕಾಮಗಾರಿ ಆದೇಶ ಪ್ರತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ಗುತ್ತಿಗೆದಾರರಿಗೆ ಯಾವುದೇ ಬಿಲ್ ಮಾಡಬೇಡಿ, ಈ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಕೃಷಿ ಅಧಿಕಾರಿ ಮಾರುತಿ ಅವರು 2024 ಡಿ.7ರಂದು ಪಿಆರ್‌ಇಡಿ ಇಲಾಖೆಗೆ ಬರೆದ ಪತ್ರಕ್ಕೆ ಈವರೆಗೆ ಉತ್ತರ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪ್ರಕರಣ 3 ಕೆಲ ತಿಂಗಳಲ್ಲಿಯೇ ಹದಗೆಟ್ಟ ರಸ್ತೆ ತಾಲೂಕಿನ ಸಿದ್ದಾಪುರದ ಮುಖ್ಯ ರಸ್ತೆಯಿಂದ ಈಳಿಗನೂರು ಗ್ರಾಮದವರೆಗೆ ಪಿಆರ್‌ಇಡಿ ಇಲಾಖೆಯಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಕಾಮಗಾರಿ ಮುಗಿದ ಮೂರ್ನಾಲ್ಕು ತಿಂಗಳಲ್ಲೇ ರಸ್ತೆ ಹದೆಗೆಟ್ಟು ಹೋಗಿದೆ. ಕೋಟ್ಯಂತರ ರೂ. ವ್ಯಯಿಸಿರುವ ಕಾಮಗಾರಿ ಕಳಪೆ ಆಗಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ----- ಪ್ರಭಾವಿ ರಾಜಕಾರಣಿ ಕೃಪಾಕಟಾಕ್ಷ ಪಿಆರ್‌ಇಡಿ ಕೆಲಸಗಳು ತಾಲೂಕಿನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ನಿರ್ಮಾಣ ಮಾಡಲಾಗಿರುವ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮವಾಗಬೇಕು ಎನ್ನುವುದು ಜನರ ಆಗ್ರಹವಾಗಿವೆ. ಆದರೆ, ಪಿಆರ್‌ಇಡಿ ಎಇಇ ವಿಜಯ ಕುಮಾರ್ ಮೇಲೆ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಕೃಪಾಕಟಾಕ್ಷವಿದೆ. ಹೀಗಾಗಿ ಶಿಸ್ತುಕ್ರಮದಿಂದ ಅಧಿಕಾರಿ ಬಚಾವ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
ಬೂದಗುಂಪಾ-ಉಳೇನೂರು ರಸ್ತೆ ನಿರ್ಮಾಣ ಕಾಮಗಾರಿಯನ್ನು ಪಿಎಂಜಿಎಸ್‌ವೈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. 2021-22ನೇ ಸಾಲಿನ ಕಾಮಗಾರಿ ಇನ್ನೂ ನಡೆಯುತ್ತಿದೆ. ಆದರೆ, ಪಿಆರ್‌ಇಡಿ ಇಲಾಖೆಯಿಂದ ಇದಕ್ಕೆ ಬಿಲ್ ಎತ್ತಿರುವುದು ನಮ್ಮ ಗಮನಕ್ಕಿಲ್ಲ. ಬೇರೆ ಇಲಾಖೆಯಿಂದ ನಾವು ನಿರ್ಮಾಣ ಮಾಡುತ್ತಿರುವ ರಸ್ತೆಗೆ ಬಿಲ್ ಎತ್ತಲು ಬರುವುದಿಲ್ಲ. ಸಿದ್ದಪ್ಪ ಜೆಇ, ಪಿಎಂಜಿಎಸ್‌ವೈ, ಕಾರಟಗಿ