

ಹುಬ್ಬಳ್ಳಿ: ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ದೇವರ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇದೆ ಎಂದು ಡಾ. ಸತ್ಯಮೂರ್ತಿ ಆಚಾರ್ಯ ಹೇಳಿದರು.
ಅಧಿಕ ಮಾಸ ನಿಮಿತ್ತ ಇಲ್ಲಿನ ಕೇಶ್ವಾಪುರ ರಾಘವೇಂದ್ರ ಕಾಲನಿಯಲ್ಲಿ ಶ್ರೀ ಮಾರುತಿ ಮಹಿಳಾ ಭಜನಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಅಖಂಡ 33 ದಿನಗಳ ಕಾಲ, ಪ್ರತಿದಿನ ಮೂವತ್ಮೂರು ದೇವರನಾಮಗಳ ಭಜನಾ ಕಾರ್ಯಕ್ರಮದ ಮಂಗಲ ಮಹೋತ್ಸವದಲ್ಲಿ ಗುರುವಾರ ಪಾಲ್ಗೊಂಡು ಅವರು ಮಾತನಾಡಿದರು.
ಈ ಮಾಸದಲ್ಲಿ ದೇವರ ಭಕ್ತಿ ಸಂಕೀರ್ತನೆ, ಪೂಜೆ, ಪುನಸ್ಕಾರ ಹಾಗೂ ದಾನ ಮಾಡುವಂತಹ ಸತ್ಕಾರ್ಯಗಳಿಂದ ಅಧಿಕ ಪ್ರಯೋಜನವಾಗುವುದು ಎಂದರು.
ಭಜನಾ ಮಂಡಳಿಯ ಪರವಾಗಿ ಸತ್ಯಭೋದ ಬಾಗಲ ದಂಪತಿ, ಪಂ. ಸತ್ಯಮೂರ್ತಿ ಆಚಾರ್ಯರನ್ನು ಸನ್ಮಾನಿಸಿದರು.
ಭಜನಾ ಮಂಡಳಿಯ ಶ್ಯಾಮಲಾ ಕುಲಕರ್ಣಿ, ವಾಣಿ ಉಮರ್ಜಿ, ಮಾರುತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಕಟ್ಟಿ, ಕೃಷ್ಣ ಕಡಗದಕೈ, ಪ್ರಹ್ಲಾದ ಪರ್ವತಿ, ರಮೇಶ ಚಿಪ್ಪಲಗಟ್ಟಿ ಇತರರು ಇದ್ದರು.