

ಶಿವಮೊಗ್ಗ: ಮಿದುಳು ಜ್ವರ ಹೆಚ್ಚಿನದಾಗಿ ಮಕ್ಕಳಿಗೇ ಬರುವುದರಿಂದ, ಈ ರೋಗ ತಗುಲಿದ ಶೇ.30ರಿಂದ 50ರಷ್ಟು ಮಕ್ಕಳು ಮರಣ ಹೊಂದುವ ಸಂಭವ ಇರುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಿಎಚ್‌ಒ ಡಾ. ನಟರಾಜ್ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಆಶ್ರಯದಲ್ಲಿ ವೈದ್ಯರಿಗೆ ಆಯೋಜಿಸಿದ್ದ ಮಿದುಳು ಜ್ವರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಿದುಳು ಜ್ವರು ವೈರಾಣುವಿನಿಂದ ಉಂಟಾಗುವ ರೋಗ. ಇದು ಸೋಂಕಿರುವ ಹಂದಿಗಳು, ಹಂಸ ಪಕ್ಷಿಗಳಿಂದ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗುಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತದೆ. ಮುನ್ನೆಚ್ಚರಿಕೆ ಕ್ರಮಗಳಿಂದ ಈ ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು ಮಿದುಳು ಜ್ವರದ ಲಕ್ಷಣಗಳು. ಕಾಯಿಲೆ ಉಲ್ಬಣಗೊಂಡಾಗ ಮಿದುಳು ಊತಗೊಂಡು ಸಾವು ಸಂಭವಿಸಬಹುದು. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ಮಿದುಳು ಜ್ವರಕ್ಕೆ ಲಸಿಕೆ ಕೊಡಿಸಬೇಕು. ಹಂದಿಗಳನ್ನು ಜನವಸತಿಯಿಂದ ಕನಿಷ್ಠ 3 ಕಿ.ಮೀ ದೂರಕ್ಕೆ ಸ್ಥಳಾಂತರಿಸಬೇಕು. ಸಂಜೆ ವೇಳೆ ಮೈ ತುಂಬ ಬಟ್ಟೆ ಧರಿಸಿ ಓಡಾಡಬೇಕು. ಹಂದಿ ಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸಬೇಕು. ರೋಗ ಲಕ್ಷಣ ಕಂಡುಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ವೈದ್ಯರಾದ ಡಾ. ಪೃಥ್ವಿ, ಡಾ. ಶಶಿಕಾಂತ್, ಡಾ. ಪಿ.ಕೆ.ಪೈ ಅವರು ಮೆದುಳು ಜ್ವರದ ಲಕ್ಷಣಗಳು, ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದರು.
ಮಿದುಳು ಜ್ವರ ರೋಗವು 2005ರಲ್ಲಿ ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಪ್ರತಿ ವರ್ಷ ವಿಶ್ವದಲ್ಲಿ 50 ಸಾವಿರ ಪ್ರಕರಣಗಳು ಕಂಡುಬರುತ್ತವೆ. ಈ ಪೈಕಿ 10 ಸಾವಿರ ಸಾವು ಸಂಭವಿಸುತ್ತಿವೆ. ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.85ರಷ್ಟು ಮಿದುಳು ಜ್ವರದ ಪ್ರಕರಣಗಳು ಕಂಡುಬರುತ್ತಿವೆ. - ಡಾ. ಗುಡದಪ್ಪ ಕಸಬಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ