ಮಳೆಗಾಲಕ್ಕೆ ವಹಿಸಲಿಲ್ಲ ಮುನ್ನೆಚ್ಚರಿಕೆ ಕ್ರಮ

Precautionary measures were not taken for rainy season
Published on

ಮಡಿಕೇರಿ:

ಕೊಡಗಿನಲ್ಲಿ ಮಳೆಗಾಲ ಬಿರುಸು ಪಡೆದುಕೊಂಡಿದೆ. ಪುನರ್ವಸು ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗ ಅಲ್ಲಲ್ಲಿ ಮರ ಬೀಳುವುದು, ಇದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದು ಸಾಮಾನ್ಯ ದೃಶ್ಯವಾಗಿದೆ. ರಸ್ತೆ ಬದಿಯ ಚರಂಡಿಗಳಲ್ಲಿ ಸರಿಯಾಗಿ ನೀರು ಹರಿದು ಹೋಗದೆ ರಸ್ತೆ ಮೇಲೆ ನೀರು ಬರುವುದರಿಂದಲೂ ವಾಹನಗಳನ್ನು ಚಲಾಯಿಸಲು ಕಷ್ಟ ಆಗುತ್ತಿದೆ. ಮಳೆಗಾಲಕ್ಕೂ ಮೊದಲು ಸೂಕ್ತ ಸಿದ್ಧತೆಗಳನ್ನು ನಡೆಸದಿರುವುದೇ ಇಂಥ ಅನಾಹುತಗಳಿಗೆ ಕಾರಣ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುವ ಮೊದಲು ಮೇ ಅಂತ್ಯ ಮತ್ತು ಜೂನ್ ತಿಂಗಳಿನಲ್ಲಿ ಮಳೆಗಾಲವನ್ನು ಎದುರಿಸಲು ಲೋಕೋಪಯೋಗಿ, ಸೆಸ್ಕ್, ಅರಣ್ಯ ಸೇರಿದಂತೆ ಸಂಬAಧಿಸಿದ ಇಲಾಖೆಗಳಿಂದ ಅಗತ್ಯ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತದೆ. ರಸ್ತೆ ಬದಿಯ ಕುರುಚಲು ಕಾಡು ಸವರುವುದು, ರಸ್ತೆ ಬದಿಯಲ್ಲಿನ ಅಪಾಯಕಾರಿ ಮರಗಳನ್ನು ತೆರವು ಮಾಡುವುದು, ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು, ದುರ್ಬಲ ವಿದ್ಯುತ್ ಕಂಬ ಬದಲಾಯಿಸುವುದು, ಜೋತಾಡುವ ವಿದ್ಯುತ್ ತಂತಿಗಳನ್ನು ಸರಿ ಮಾಡುವುದು… ಹೀಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಆದರೆ ಈ ವರ್ಷ ಈ ಕೆಲಸಗಳು ಯಾವುದು ಕೂಡ ಸರಿಯಾಗಿ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಹಾಗಾಗಿಯೇ ಈ ಬಾರಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನಾನೂಕೂಲದ ಸನ್ನಿವೇಶ ಕಂಡುಬAದಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಮಳೆಗಾಲದಲ್ಲಿ ವಿಪರೀತ ಗಾಳಿಗೆ ಮರಗಳು ಧರೆಗೆ ಉರುಳುತ್ತವೆ. ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇದು ಗೊತ್ತಿದ್ದೂ ಸಂಬAಧಿಸಿದ ಇಲಾಖೆ ಕಾರ್ಯಪ್ರವೃತವಾಗದೇ ಇರುವುದು ದುರದೃಷ್ಟಕರ. ಮಳೆಗಾಲಕ್ಕೂ ಮುಂಚೆ ಅಪಾಯದ ಹಂತದಲ್ಲಿ ಇರುವ ಮರಗಳನ್ನು ತೆರವುಗೊಳಿಸಿದ್ದರೆ ಸಮಸ್ಯೆ ಬಗೆಹರಿಯುತ್ತದೆ. ಜತೆಯಲ್ಲಿ ಸೂಕ್ಷ್ಮ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿ ಮಳೆಗಾಲದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಬೇಕು.
ನಾಟೋಳಂಡ ಗಿರೀಶ್, ಗೋಣಿಕೊಪ್ಪ ನಿವಾಸಿ

ಮಳೆಗಾಲ ಪ್ರಾರಂಭಕ್ಕೂ ಮುನ್ನ ರಸ್ತೆಗೆ ಬಾಗಿರುವ ಮರದ ರೆಂಬೆಗಳನ್ನು ತೆರವುಗೊಳಿಸಬೇಕಿತ್ತು. ಆ ಕೆಲಸವನ್ನು ಮಾಡದೇ ಇರುವುದರಿಂದ ಇದೀಗ ಮಳೆಗಾಲದಲ್ಲಿ ಅಲ್ಲಲ್ಲಿ ಮರಗಳು ರಸ್ತೆಗೆ ಬೀಳುತ್ತಿದೆ. ರಸ್ತೆಯ ಬದಿ ಮಣ್ಣು ಕುಸಿತವಾಗುವುದು ಗೊತ್ತಿದ್ದರೂ ತಡೆಗೋಡೆ ಮಾಡದೇ ಸಂಬAಧಪಟ್ಟವರ ಬೇಜಬ್ದಾರಿ ಎತ್ತಿ ತೋರಿಸುತ್ತಿದೆೆ.
ಕೆ.ಟಿ. ಹರೀಶ್, ಕೃಷಿಕ, ಕುಜಿಗೇರಿ, ದುಂಡಳ್ಳಿ

ರಾಜ್ಯ ಹೆದ್ದಾರಿಯ ಇಕ್ಕಲೆಗಳಲ್ಲಿರುವ ಅಪಾಯಕಾರಿ ಮರಗಳು ಹಾಗೂ ರೆಂಬೆಗಳನ್ನು ಮುಂಗಾರು ಪ್ರಾರಂಭಕ್ಕೆ ಮೊದಲು ತೆಗೆಯಬೇಕು. ಈಗ ಮಳೆ ಜೋರಾಗಿ ಬೀಳುತ್ತಿರುವುದರಿಂದ ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದು ವಾಹನ ಸಂಚಾರ ಹಾಗೂ ವಿದ್ಯುತ್ ಸಂಪರ್ಕಕ್ಕೆ ಸಮಸ್ಯೆಯಾಗುತ್ತಿದೆ. ಕೊಡಗಿನಲ್ಲಿ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ರುಬಿನಾ ಎಂ.ಎ., ಗೃಹಿಣಿ, ಸೋಮವಾರಪೇಟೆ

ನಾವು ಹೆಚ್ಚಿನ ಶ್ರಮಿಕರು ಮಳೆಯಿಂದ ಹಾನಿ ಆದ ನಂತರ ಪರಿಹಾರಕ್ಕಾಗಿ ನಿರೀಕ್ಷೆ ಮಾಡುತ್ತೇವೆ. ಇದಕ್ಕೂ ಮೊದಲು ನಮ್ಮ ಪರಿಸರದತ್ತ ಗಮನಹರಿಸಬೇಕು. ನಮ್ಮ ಸುತ್ತಲಿನ ಗದ್ದೆ, ತೋಟದಲ್ಲಿನ ಅಪಾಯಕಾರಿ ಮರ, ರೆಂಬೆಗಳನ್ನು ನಾವೇ ತೆರವು ಮಾಡಬೇಕು. ಕೇವಲ ಪರಿಹಾರದ ಮೊತ್ತ ಪಡೆಯುವುದು ಮಾತ್ರ ನಮ್ಮ ಕೆಲಸವಾಗಬಾರದು. ಮಳೆಗಾಲದ ಪೂರ್ವಸಿದ್ಧತೆಗೆ ಅಧಿಕಾರಿಗಳ ಜತೆ ನಾವೂ ಕೈ ಜೋಡಿಸಬೇಕು.
ಬಿ.ಸಿ. ಚೆನ್ನಪ್ಪ, ನಿರ್ದೇಶಕ, ಕೊಡಗು ಏಲಕ್ಕಿ ಮಾರಾಟಗಾರರ ಸಹಕಾರ ಸಂಘ

ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆAದರೆ ಮಣ್ಣು ಜರಿಯುವುದು, ರಸ್ತೆಗಳು ಕುಸಿಯುವುದು ಸಾಮಾನ್ಯ. ಸರಿಯಾದ ಚರಂಡಿ ವ್ಯವಸ್ಥೆ ಮಾಡದಿರುವುದು ಹಾಗೂ ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಮಳೆ ನೀರು ಎಲ್ಲೆಂದರಲ್ಲಿ ಕೊಚ್ಚಿ ಹೋಗಿ ರಸ್ತೆಗಳು ಕುಸಿಯುತ್ತದೆ. ರಸ್ತೆಯ ಬದಿಯಲ್ಲಿರುವ ಬೃಹದಾಕಾರ ಮರಗಳ ರೆಂಬೆ ಕತ್ತರಿಸದ ಕಾರಣದಿಂದಲೂ ಅಪಾಯ ಸಂಭವಿಸುತ್ತದೆ. ಮಳೆಗಾಲಕ್ಕೆ ಬೇಕಾದಂಥ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಬಾರಿ ತೆಗೆದುಕೊಂಡಿರಲಿಲ್ಲ.
ರಕ್ಷಿತ್ ಬಿ.ವಿ., ಬೇಟೋಳಿ ಗ್ರಾಮ, ವಿರಾಜಪೇಟೆ

ಅಧಿಕಾರಿಗಳ ನಿರ್ಲಕ್ಷö್ಯದಿಂದ ಕೊಡಗಿನಲ್ಲಿ ಪ್ರತಿವರ್ಷ ರಸ್ತೆ ಕುಸಿಯುವುದು, ಮರಗಳು ಬಿದ್ದು ರಸ್ತೆ ಹಾನಿ ಆಗಿ ರಸ್ತೆ ಸಂಚಾರಕ್ಕೆ ಅಡ್ಡಿ ಸಾಮಾನ್ಯ ಎಂಬAತಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಬದಿಯ ಮರಗಳ ಕೊಂಬೆ ತೆರವುಗೊಳಿಸದಿರುವುದು, ಕೆಲವು ಕಡೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಕುಸಿಯುವುದು ಹಾಗೂ ರಸ್ತೆಗಳಲ್ಲಿ ಬಿರುಕು ಕಾಣಿಸಿ ಕೊಳ್ಳುವುದು ಪ್ರತಿ ವರ್ಷವೂ ಕಂಡುಬರುತ್ತದೆ.
ಕಮಲಮ್ಮ, ಹೆಗ್ಗಳ ಗ್ರಾಮ, ವಿರಾಜಪೇಟೆ

ಮಳೆಗಾಲದ ಅರ್ಧ ಅವಧಿ ಕಳೆಯುತ್ತಾ ಬಂದರೂ ಯಾವ ರಸ್ತೆಯಲ್ಲೂ ಜಂಗಲ್ ಕಟ್ ಮಾಡಿಲ್ಲ. ಬಸ್‌ಗಳಲ್ಲಿ ಓಡಾಡುವಾಗ ರಸ್ತೆ ಬದಿಯ ಮರ, ಗಿಡಗಳ ರೆಂಬೆಗಳು ಕಿಟಕಿಯಿಂದ ಒಳಬಂದು ಪ್ರಯಾಣಿಕರ ಮುಖಕ್ಕೆ ಹೊಡೆಯುತ್ತದೆ. ಮಳೆಗಾಲ ಶುರುವಾಗುವ ಮೊದಲು ಜಂಗಲ್ ಕಟ್ ಮಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲ. ಕೆಲವು ಕಡೆಗಳಲ್ಲಿ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲವೂ ಆಗಿಲ್ಲ.
ಎಂ.ಪಿ. ಸುಜಾ ಕುಶಾಲಪ್ಪ, ವಿಧಾನಪರಿಷತ್ ಸದಸ್ಯ

ಕೆಲವು ಕಡೆಗಳಲ್ಲಿ ಈಗಾಗಲೇ ಜಂಗಲ್ ಕಟ್ಟಿಂಗ್ ಮಾಡಲಾಗಿದೆ. ಮತ್ತೆ ಕೆಲವು ಭಾಗಗಳಲ್ಲಿ ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣ ಕೆಲಸಗಳು ವಿಳಂಬ ಆಗಿದೆ. ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿ ಮುಗಿಸಲಾಗಿದೆ. ಉಳಿದೆಡೆ ಅಲ್ಲಲ್ಲಿ ಕೆಲಸಗಳು ನಡೆಯುತ್ತಿವೆ.
ಸಿದ್ದೇಗೌಡ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ

ಸೋಮವಾರಪೇಟೆ, ತೋಳೂರುಶೆಟ್ಟಳ್ಳಿ ಕೂತಿ, ಸಕಲೇಶಪುರ ಮಾರ್ಗದ ರಾಜ್ಯಹೆದ್ದಾರಿಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಮರಗಳು ರಸ್ತೆಯಲ್ಲಿ ಬಿದ್ದು ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ಕೆಲಕಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲ ಸೆಸ್ಕ್ ಹಾಗೂ ಲೋಕೋಪಯೋಗಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
ಲಕ್ಶ್ಮೀಕಾಂತ್, ಕೃಷಿಕ, ಕೂತಿ ಗ್ರಾಮ

ಪ್ರತಿ ಮಳೆಗಾಲದಲ್ಲಿ ಇಂತಹ ಪರಿಸ್ಥಿತಿ ಇದ್ದೇ ಇರುತ್ತದೆ. ಆದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಡೆಯಲು ಹೋಗುವುದಿಲ್ಲ. ರಸ್ತೆ ಬದಿಯಲ್ಲಿ ಒಣಗಿದ ಮರಗಳನ್ನು ಮಳೆಗಾಲ ಆರಂಭಕ್ಕೂ ಮೊದಲೇ ತೆರವುಗೊಳಿಸಬೇಕು. ಬೆಟ್ಟಗುಡ್ಡಗಳು ಸಡಿಲವಾಗಿರುವುದರ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದು ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.
ವಿಶ್ವೇಶ್ವರಯ್ಯ, ಕೂಡಿಗೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net