

ಹನೂರು: ತಾಲೂಕಿನ ಮಂಗಲ ಸಮೀಪದ ಹುಲುಸುಗುಡ್ಡೆ ಮೂಲಕ ಕಣ್ಣೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಅಪಘಾತ ತಡೆಗೆ ಕ್ರಮವಹಿಸಿದ್ದಾರೆ.
ಈ ಮುಖ್ಯ ರಸ್ತೆಯಿಂದ ಅಡ್ಡರಸ್ತೆ ಮಾರ್ಗವಾಗಿ ಕಣ್ಣೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹನೂರು ಹಾಗೂ ಈ ಭಾಗಕ್ಕೆ ಆಗಮಿಸುವ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಹೆಚ್ಚು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಆದರೆ ಇದೀಗ ಮ.ಬೆಟ್ಟದ ಮುಖ್ಯರಸ್ತೆಯನ್ನು ಕೆ-ಶಿಪ್ ಯೋಜನೆಯಡಿ ನೂತನವಾಗಿ ನಿರ್ಮಿಸಿರುವುದರಿಂದ ರಸ್ತೆಯ ಎರಡೂ ಕಡೆ ಬರುವ ವಾಹನಗಳು ಸವಾರರಿಗೆ ಸರಿಯಾಗಿ ಕಾಣಿಸುವುದಿಲ್ಲ. ಜತೆಗೆ ವಿಶಾಲವಾದ ಈ ರಸ್ತೆಯಲ್ಲಿ ವಾಹನಗಳ ವೇಗ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು-ನೋವು ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭ ವಿಸುವಂತಾಗಿತ್ತು.
ಏತನ್ಮಧ್ಯೆ ಗುರುವಾರ ಇದೇ ಸ್ಥಳದಲ್ಲಿ ಬೈಕ್ ಹಾಗೂ ಕಾರಿನ ನಡುವೆ 2 ಪ್ರತ್ಯೇಕ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಗಾಯಗೊಂಡು ಇವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹಾಗಾಗಿ ಈ ರಸ್ತೆಯಲ್ಲಿ ಹಂಪ್ಸ್ ಇಲ್ಲವೆ ಸೂಚನಾ ಫಲಕವನ್ನು ಅಳವಡಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿತ್ತು.
ಈ ಬಗ್ಗೆ ಶುಕ್ರವಾರದ ವಿಜಯವಾಣಿ ಸಂಚಿಕೆಯಲ್ಲಿ ಸೂಚನಾ ಫಲಕ ಅಳವಡಿಸಿ ಉಪ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಹನೂರು ಪೊಲೀಸರು ರಸ್ತೆಯ ಎರಡೂ ಬದಿಯಲ್ಲೂ ಬ್ಯಾರಿಕೇಡ್ ಅಳವಡಿಸಿದ್ದು, ಅಪಘಾತ ತಡೆಗೆ ಕ್ರಮವಹಿಸಿದ್ದಾರೆ. ಇದರಿಂದ ಈ ಸ್ಥಳದಲ್ಲಿ ವಾಹನಗಳ ವೇಗಕ್ಕೆ ಕೊಂಚ ಕಡಿವಾಣ ಬಿದ್ದಂತಾಗಿದೆ. ವಾಹನ ಸವಾರರು ಈ ಸ್ಥಳದ ಬಳಿ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ.