ಬಾಲ್ಯ ವಿವಾಹದ ಬಗ್ಗೆ ಕಟ್ಟೆಚ್ಚರ ವಹಿಸಿ

30blrp8 (1)
ಬೇಲೂರು ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಜನಸ್ಪಂದನಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿದರು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಬಿಕ್ಕೋಡು ಹೋಬಳಿಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿದ್ದು, ಅವರಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ಕಂಡು ಬರುತಿವೆ. ಹೀಗಾಗಿ ತಾಲೂಕಿನಲ್ಲಿ ಬಾಲ್ಯ ವಿವಾಹವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಸೂಚಿಸಿದರು.

ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದ ಅಂಗವಾಗಿ ತಹಸೀಲ್ದಾರ್ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಮಲೆನಾಡು ಭಾಗದಲ್ಲಿ ವಲಸೆ ಕಾರ್ಮಿಕರು ಹೆಚ್ಚಿದ್ದಾರೆ. ಇಲ್ಲಿ ಬಾಲ್ಯ ವಿವಾಹವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಹಕರಿಸಬೇಕು. ಬೇಲೂರು ತಾಲೂಕಿಗೆ ಎಷ್ಟು ವಲಸಿಗರು ಬಂದಿದ್ದಾರೆ, ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂಬುದರ ಮಾಹಿತಿ ಪಡೆಯಬೇಕು. 16 ವರ್ಷ ಒಳಪಟ್ಟ ವಿದ್ಯಾರ್ಥಿಗಳು ಶಾಲಾ ಕೊಠಡಿ ಅಥವಾ ಆಟದ ಮೈದಾನದಲ್ಲಿ ಇರಬೇಕು. ಅದನ್ನು ಬಿಟ್ಟು ಇತರೆಡೆ ಕಾಣಬಾರದು. ಜತೆಗೆ ವಲಸೆ ಕಾರ್ಮಿಕರ ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗಿರಬಾರದು. ಅವರಿಗೆ ಶಿಕ್ಷಣ ಕೊಡುವುದಕ್ಕೆ ಇಲಾಖೆ ಮುಂದಾಗಲಿದೆ ಎಂದು ತಿಳಿಸಿದರು.

ವಲಸಿಗರಲ್ಲಿ ಕೆಲವರಿಗೆ ಆಧಾರ್ ಕಾರ್ಡ್ ಇದ್ದರೆ ಮತ್ತೆ ಕೆಲವರಿಗೆ ಇಲ್ಲ. ಅಂತವರನ್ನು ಗುರುತಿಸಿ ಕಾರ್ಡ್ ನೀಡಲಾಗುವುದು. 18 ವರ್ಷದೊಳಗಿನವರು ವಿವಾಹವಾಗಿದ್ದು ಹಾಗೂ ಮಾಡಿದ್ದು ಕಂಡು ಬಂದರೆ ಪೂಜಾರಿ, ಕಲ್ಯಾಣ ಮಂಟಪ, ಶಾಮಿಯಾನ ಸೇರಿದಂತೆ ಬಾಲ್ಯ ವಿವಾಹಕ್ಕೆ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ವಿವಾಹವಾಗುವವರು ತಹಸೀಲ್ದಾರ್ ಕಚೇರಿ, ಉಪ ತಹಸೀಲ್ದಾರ್, ಗ್ರಾಮ ಪಂಚಾಯಿತಿ, ವಿವಿಧ ಇಲಾಖೆ ಅಧಿಕಾರಿಗಳಲ್ಲಿ ಅಧಿಕೃತವಾಗಿ ವಯಸ್ಸಿನ ದೃಢೀಕರಣ ಪತ್ರ ಪಡೆದು ವಿವಾಹಕ್ಕೆ ಮುಂದಾಗುವುಂತೆ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದರು.

ಬಾಲ್ಯ ವಿವಾಹ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ದೇಗುಲ, ಮಸೀದಿ, ಚರ್ಚ್, ಕಲ್ಯಾಣ ಮಂಟಪಗಳಿಗೆ ಕಠಿಣ ಆದೇಶ ನೀಡಲಾಗುವುದು. ತಾಲೂಕಿನ ಎಲ್ಲ ಅಂಗಡಿಗಳು, ಹೋಟೆಲ್, ಸರ್ಕಾರಿ ಕಚೇರಿಗಳಲ್ಲೂ ಶೇ.60 ರಷ್ಟು ಕನ್ನಡದಲ್ಲಿ ಡ್ಡಾಯವಾಗಿ ನಾಮ ಫಲಕ ಹಾಕಬೇಕು. ಪ್ರತಿ ತಿಂಗಳ ಮೊದಲ ವಾರ ತಾಲೂಕು ಮಟ್ಟ ಹಾಗೂ ಪ್ರತಿ ಮೂರನೇ ವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಸಭೆ ನಡೆಯಲಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.

ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಮುಖಂಡ ಮಂಜುನಾಥ್ ಮಾತನಾಡಿ, ಅರೇಹಳ್ಳಿ ಭಾಗದಲ್ಲಿ 3 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಜಮೀನುಗಳ ಹತ್ತಿರ ಜಾಗ ಇರುವವರು ಶೆಡ್‌ಗಳನ್ನು ನಿರ್ಮಿಸಿ ವಲಸಿಗರಿಗೆ 6 ರಿಂದ 7 ಸಾವಿರದವರೆಗೆ ಹಣ ಪಡೆದು ಮನೆ ಬಾಡಿಗೆ ನೀಡುತ್ತಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ. ಇದರ ಬಗ್ಗೆ ತಾಲೂಕು ಆಡಳಿತ ಮತ್ತು ಪೊಲೀಸ್, ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದರು.

ಆರಕ್ಷಕ ನಿರೀಕ್ಷಕ ರೇವಣ್ಣ, ಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಕರವೇ ಅಧ್ಯಕ್ಷ ಚಂದ್ರಶೇಖರ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net