

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಕರೊನಾ ಸೋಂಕು ಕಳೆದ ತಿಂಗಳು ಒಂದು ಲಯದಲ್ಲಿದ್ದರೆ, ಈ ತಿಂಗಳಲ್ಲಿ ಇನ್ನೊಂದು ಸ್ವರೂಪಕ್ಕೆ ತಿರುಗಿದ್ದು, ವೈದ್ಯಕೀಯ ಕ್ಷೇತ್ರವನ್ನೂ ಆತಂಕಕ್ಕೆ ದೂಡುತ್ತಿದೆ. ಜನ ಜಾಗ್ರತೆ ವಹಿಸದಿದ್ದಲ್ಲಿ, ಸಮಸ್ಯೆ ಉಂಟಾಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಚ್ಚರಿಕೆಯೇ ಕರೊನಾಕ್ಕೆ ಸರಿಯಾದ ಮದ್ದಾಗಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಭೀಕರವಾಗುವ ಸಾಧ್ಯತೆ ಇದೆ.
ಆರೋಗ್ಯ ಇಲಾಖೆ ವಿಶ್ಲೇಷಣೆ ಪ್ರಕಾರ ಮಾರ್ಚ್‌ನಲ್ಲಿ ತರುಣ ಮತ್ತು ಯುವ ಸಮೂಹದಲ್ಲಿ ಹೆಚ್ಚು ಸೋಂಕಿತರಿದ್ದರೆ, ಏಪ್ರಿಲ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಮಧ್ಯ ವಯಸ್ಕರು ಹಾಗೂ ಹಿರಿಯ ನಾಗರಿಕರಲ್ಲಿ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಮಾ.1ರಿಂದ ಏಪ್ರಿಲ್ 13ರವರೆಗೆ 2,744 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 14 ವರ್ಷದೊಳಗಿನ 149 ಮಂದಿಗೆ ಸೋಂಕು ತಗುಲಿದರೆ, 15-24 ವರ್ಷದೊಳಗಿನ 1,383 ಜನರಿಗೆ (ಶೇ.50.40) ಕರೊನಾ ಕಾಣಿಸಿಕೊಂಡಿದೆ. 25-49 ವರ್ಷದೊಳಗಿನ 683 ಮಂದಿಗೆ ಮತ್ತು 50 ವರ್ಷ ಮೇಲ್ಪಟ್ಟ 529 ಜನರಲ್ಲಿ ಪಾಸಿಟಿವ್ ಆಗಿದೆ.
ಕಳೆದ ತಿಂಗಳು ಮತ್ತು ಈ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಮನಿಸಿದರೆ ವ್ಯತ್ಯಾಸ ಕಂಡುಬರುತ್ತಿದೆ. ಮಾರ್ಚ್ ತಿಂಗಳಲ್ಲಿ ಲಕ್ಷಣಗಳೊಂದಿಗೆ ಸೋಂಕು ದೃಢಪಡುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಏಪ್ರಿಲ್‌ನಲ್ಲಿ ಸಾಕಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸೋಂಕು ಹರಡುವ ವೇಗವೂ ಜಾಸ್ತಿಯಾಗಿದೆ. ಕಳೆದ ವರ್ಷ ಸೋಂಕಿತರ ಸಂಪರ್ಕಿತರಿಗೆ ಸೋಂಕು ಕಾಣಿಸಿಕೊಳ್ಳುವುದು ಕಡಿಮೆಯಿದ್ದರೆ, ಎರಡನೇ ಅಲೆಯಲ್ಲಿ ಜಾಸ್ತಿ ಇದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಹೆಚ್ಚು ಸೋಂಕು ದೃಢಪಡುತ್ತಿದೆ. ಜಿಲ್ಲೆಯಲ್ಲಿ ಒಬ್ಬ ಸೋಂಕಿತನಿಗೆ 15-20 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಗ್ರಾಮೀಣ ಭಾಗದವರಿಗೆ ಆತಂಕ: ಜಿಲ್ಲೆಯಲ್ಲಿ ಸದ್ಯ ಗ್ರಾಮೀಣ ಭಾಗದ ಜನ ಹೆಚ್ಚು ಆತಂಕ ಪಡುವಂತಾಗಿದೆ. ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಕರೊನಾ ಹೆಚ್ಚುತ್ತಿರುವ ಹಿನ್ನೆಲೆ, ಲಾಕ್‌ಡೌನ್ ಭೀತಿಯಿಂದ ಹಳ್ಳಿಗೆ ಮರಳುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಮದುವೆ ಸಮಾರಂಭ ಹೆಚ್ಚಿರುವ ಹಿನ್ನೆಲೆಯಲ್ಲಿಯು ಊರಿಗೆ ಬರುತ್ತಿರುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್-19 ಸಮುದಾಯಕ್ಕೆ ಹರಡುವ ಭೀತಿ ಗ್ರಾಮೀಣ ಭಾಗದಲ್ಲಿ ಕಾಡುತ್ತಿದೆ.
ಮತ್ತೆ ತಗುಲುತ್ತಿದೆ ಸೋಂಕು: ಈ ಹಿಂದೆ ಕರೊನಾ ಕಾಣಿಸಿಕೊಂಡಿದ್ದವರಿಗೆ ಮತ್ತೆ ಕರೊನಾ ತಗುಲುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಮ್ಮೆ ಕರೊನಾ ಬಂದಲ್ಲಿ ಇನ್ನೊಮ್ಮೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು. ಆದರೆ ಕರೊನಾ ರಿಪೀಟ್ ಪ್ರಕರಣ ಹೆಚ್ಚುತ್ತಿದೆ. ಇತ್ತೀಚೆಗೆ ಜರುಗಿದ ತಜ್ಞರ ಸಮೀತಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪವಾಗಿದೆ.
ಮದುವೆಗೆ ಪಾಸ್ ಕಡ್ಡಾಯ: ಕೆಲವು ದಿನ ಸಾಕಷ್ಟು ಮದುವೆಗಳು ನಡೆಯಲಿದ್ದು, ಬಹುತೇಕ ಹಾಲ್‌ಗಳು, ಹೋಟೆಲ್‌ಗಳು ಬುಕ್ ಆಗಿವೆ. ಮದುವೆಯಲ್ಲಿ ಪಾಲ್ಗೊಳ್ಳುವವರಿಗೆ ಕಡ್ಡಾಯ ಪಾಸ್ ಪಡೆಯುವ ನಿಯಮ ಜಾರಿಗೆ ತರಲಾಗಿದೆ. ಮದುವೆಗೂ ಮುನ್ನ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬೇಕು.
ವಿಶೇಷ ತಂಡಗಳ ರಚನೆ: ಸಾರ್ವಜನಿಕರು ಗುಂಪು ಸೇರದಂತೆ ಮಾಡಲು, ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸಲು ಮತ್ತು ನಿಯಮ ಉಲ್ಲಿಂಘಿಸುವರ ವಿರುದ್ಧ ನಿಗಾ ವಹಿಸಿ, ಕಾನೂನು ಕ್ರಮ ಕೈಗೊಳ್ಳಲು ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಿಶೇಷ ಅಧಿಕಾರಿಗಳ ತಂಡ ನೇಮಿಸಲಾಗಿದೆ.
ಜನರಿಂದಲೇ ನಿರ್ಲಕ್ಷೃ: ಸರ್ಕಾರ ಮಾರ್ಗಸೂಚಿ, ಅಧಿಕಾರಿ ವರ್ಗದ ಮನವಿಗೆ ಸಾರ್ವಜನಿಕ ವಲಯ ನಿರ್ಲಕ್ಷೃ ವಹಿಸುತ್ತಿದೆ. ಮಾರುಕಟ್ಟೆ, ಮದುವೆ, ಶಾಪಿಂಗ್ ಮಾಲ್, ಬಸ್ ನಿಲ್ದಾಣ ಇನ್ನಿತರ ಕಡೆ ಜನರು ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಸರ್ಕಾರಿ ಕಚೇರಿಗಳೂ ಇದಕ್ಕೆ ಹೊರತಾಗಿಲ್ಲ. ದೈಹಿಕ ಅಂತರ ಪಾಲನೆಯಾಗುತ್ತಿಲ್ಲ. ಮೂಗು, ಬಾಯಿ ಮುಚ್ಚಬೇಕಾದ ಮಾಸ್ಕ್ ಗಲ್ಲದಲ್ಲಿರುತ್ತದೆ.
ಜಿಲ್ಲೆಯಲ್ಲಿ ಪ್ರತಿದಿನ 2ರಿಂದ 3 ಸಾವಿರವರೆಗೆ ಕರೊನಾ ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೆ ಕರೊನಾ ದೃಢಪಟ್ಟು ಗುಣಮುಖರಾಗಿರುವರಿಗೂ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಜನ ಸುರಕ್ಷಿತವಾಗಿರಬೇಕು. ಡಾ.ಸುಧೀರ್ ಚಂದ್ರ ಸೂಡ ಉಡುಪಿ, ಡಿಎಚ್‌ಒ ಜನರ ಆರೋಗ್ಯ ದೃಷ್ಟಿಯಿಂದ ಮದುವೆ ಸಮಾರಂಭಗಳ ಮೇಲೆ ನಿಗಾ ಇಡಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿ ಮೀರಿ ಹೆಚ್ಚು ಜನರು ಸೇರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಹಸೀಲ್ದಾರ್ ಕಚೇರಿಯಲ್ಲಿ ಮದುವೆ ಪಾಸ್ ಪಡೆಯುವುದು ಕಡ್ಡಾಯ. ಜನರು ಜಿಲ್ಲಾಡಳಿತ ಜತೆಗೆ ಸಹಕರಿಸಬೇಕು. ಸದಾಶಿವ ಪ್ರಭು, ಎಡಿಸಿ ಜಿಲ್ಲೆಯಲ್ಲಿ ಕರೊನಾ 2ನೇ ಅಲೆ ಹಬ್ಬುತ್ತಿದ್ದು, ಪರಿಸ್ಥಿತಿ ಇನ್ನೂ ನಮ್ಮ ಕೈ ಮೀರಿಲ್ಲ. ಲಾಕ್‌ಡೌನ್ ಅನಿವಾರ್ಯವೂ ಅಲ್ಲ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿದಲ್ಲಿ ಕರೊನಾ ನಿಯಂತ್ರಣಕ್ಕೆ ಬರಲಿದೆ. ಕೋವಿಡ್ ವಿಚಾರದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ. ಜಿಲ್ಲಾಡಳಿತ ಸೂಚನೆಯಂತೆ ಶೇ.50 ಬೆಡ್‌ಗಳನ್ನು ಮೀಸಲಿಟ್ಟಿದ್ದೇವೆ. ಖಾಸಗಿಯಾಗಿ ಬಂದಲ್ಲಿ ಕೋವಿಡ್ ರೋಗಿ ಶುಲ್ಕ ಪಾವತಿ ಮಾಡಬೇಕು. ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮುಖೇನ ಬಂದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಲಭ್ಯ. ಸದ್ಯ ಸರ್ಕಾರಿ ಆಸ್ಪತ್ರೆ ಬೆಡ್‌ಗಳು ಇನ್ನೂ ಖಾಲಿ ಇವೆ. ಡಾ.ಜಿ.ಎಸ್ ಚಂದ್ರಶೇಖರ್ವೈದ್ಯಕೀಯ ನಿರ್ದೇಶಕ, ಆದರ್ಶ ಆಸ್ಪತ್ರೆ, ಉಡುಪಿ