ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ವಾಚನ

2
Published on

ಮೈಸೂರು: ಅಂದಾಜು 3 ಸಾವಿರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂವಿಧಾನ ಪೀಠಿಕೆ ವಾಚನ ಮಾಡಿ, ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.


ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲರವ ಮೇಳೈಸಿತ್ತು. ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಯುವರಾಜ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.


ನಾವುಗಳೆಲ್ಲ ಸಂವಿಧಾನಕ್ಕೆ ಬದ್ಧ

ಇವರೇ ಮಹಾನಾಯಕ… ಗೀತೆ ಸೇರಿದಂತೆ ಅಂಬೇಡ್ಕರ್ ಗೀತೆಗಳು ಮೊಳಗಿದವು. ಪೊಲೀಸ್ ಸಂಗೀತ ವಾದ್ಯತಂಡದಿಂದ ರಾಷ್ಟ್ರಗೀತೆ ರಿಂಗಣಿಸಿತು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ನೆರೆದಿದ್ದ ಜಿಲ್ಲೆಯ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಲಿತ ಸಂಘರ್ಷ ಸಮಿತಿಯ ಮುಖಂಡರು, ಪರಿಶಿಷ್ಟ ಪಂಗಡದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದನ್ನು ಅನುಸರಿಸಿದರು.

ಇವರೆಲ್ಲರೂ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯನ್ನು ಓದುವುದರೊಂದಿಗೆ, ನಾವುಗಳೆಲ್ಲ ಸಂವಿಧಾನಕ್ಕೆ ಬದ್ಧ ಎಂದು ಘೋಷಿಸಿದರು. ಜತೆಗೆ, ಸಂವಿಧಾನಿಕ ತತ್ವವನ್ನು ತಮ್ಮ ಜೀವನ, ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.

ಸಂವಿಧಾನವೇ ಮಾರ್ಗದರ್ಶಿ:

ಸಂವಿಧಾನ ಮಹತ್ವದ ಕುರಿತು ಮಾತನಾಡಿದ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ಅವರು, ಎಲ್ಲ ಭಾರತೀಯರಿಗೆ ಸಂವಿಧಾನವೇ ಮಾರ್ಗದರ್ಶಿ. ಇದುವೇ ಜೀವನದ ದಿಕ್ಸೂಚಿ. ಆದ್ದರಿಂದ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಜತೆಗೆ, ಪಾಲನೆ ಮಾಡಬೇಕು ಎಂದರು.


ಸಂವಿಧಾನ ದೇಶದಲ್ಲಿರುವ ಭೇದಭಾವ ಮತ್ತು ತಾರತಮ್ಯವನ್ನು ತೊಡೆದು ಹಾಕುತ್ತದೆ. ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ. ಆದ್ದರಿಂದ ಸಂವಿಧಾನದ ಪೀಠಿಕೆಯನ್ನು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಜೀವನ ಸಹ ಅರ್ಥಪೂರ್ಣವಾಗಲಿದೆ ಎಂದರು.

ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಲಿ


ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಪ್ರತಿ ಮನೆ ಮನೆಗೂ ತಲುಪಿಸಬೇಕು. ಇದು ಸರ್ವರ ಕಾಲ ಎಂಬ ಸಂದೇಶ ರವಾನೆಯಾಗಬೇಕು. ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣವಾಗಬೇಕು ಎಂದರು.


ಸ್ವಾತಂತ್ರೃ, ಸಮಾನತೆ, ಸಹೋದರತೆಯನ್ನು ಪ್ರತಿಯೊಬ್ಬರೂ ಅನುಭವಿಸಬೇಕು. ಈ ಮೂಲಕ ಸಂವಿಧಾನವನ್ನು ತಮ್ಮದಾಗಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ನಾವುಗಳೆಲ್ಲ ಭಾರತೀಯರಾಗಬೇಕು:


ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಅರ್ಥೈಸಿಕೊಳ್ಳಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಪ್ರತಿ ಮನೆಯಿಂದಲೇ ಶುರುವಾಗಬೇಕು ಎಂದರು.


ಯಾರೂ ಅರ್ಜಿ ಹಾಕಿಕೊಂಡು ನಿರ್ದಿಷ್ಟ ಜಾತಿ, ಧರ್ಮದಲ್ಲಿ ಹುಟ್ಟಿಲ್ಲ. ಅದನ್ನು ಮೀರಿ ನಾವುಗಳೆಲ್ಲ ಭಾರತೀಯರಾಗಬೇಕು. ನಾವು ಪ್ರಗತಿಯಾದರೆ ರಾಷ್ಟ್ರವೂ ಪ್ರಗತಿಯಾಗಲಿದೆ. ಇದು ಪ್ರತಿಯೊಬ್ಬರಿಗೂ ಗೌರವ ತಂದುಕೊಡುತ್ತದೆ ಎಂದು ಹೇಳಿದರು.


ಮೇಯರ್ ಶಿವಕುಮಾರ್, ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಉಪ ಮೇಯರ್ ಜಿ.ರೂಪಾ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಡಿಸಿ ಪಿ.ಶಿವರಾಜು, ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎನ್.ಮುನಿರಾಜು, ಪ್ರಮಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಮಾಜಿ ಮೇಯರ್ ಪುರುಷೋತ್ತಮ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net