

ಮೇಲುಕೋಟೆ: ವೈರಮುಡಿ ಕಿರೀಟಧಾರಣೆ ಮಹೋತ್ಸವವನ್ನು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಚರಿಸಲು ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಬುಧವಾರ ಮೇಲುಕೋಟೆಯಲ್ಲಿ ವಿವಿಧ ಅಧಿಕಾರಿಗಳು ಕೈಗೊಂಡ ಪೂರ್ವಸಿದ್ಧತೆಯನ್ನು ಪರಿಶೀಲಿಸಿ ಸಲಹೆ ನೀಡಿದರು.
ಮೇಲುಕೋಟೆಯ ಉತ್ಸವಬೀದಿ ಕಲ್ಯಾಣಿ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ಅತ್ಯಾಕರ್ಷಕವಾಗಿ ದೀಪಾಲಂಕಾರ ಮಾಡಬೇಕು. ದೇವಾಲಯದ ಆವರಣ, ಉತ್ಸವ ಆವರಣ ರಾಜಗೋಪುರದ ಮುಂಭಾಗ ವಿಶೇಷವಾದ ರೀತಿಯಲ್ಲಿ ಪುಷ್ಪಾಲಂಕಾರ ಮಾಡಬೇಕು. ಮಹಾರಾಜರು ದರ್ಶನ ಮಾಡುತ್ತಿದ್ದ ದೇವಾಲಯದ ಮುಂಭಾಗ ಸ್ಥಳದಲ್ಲಿ ಈ ವರ್ಷ ಪುಷ್ಪಮಂಟಪ ನಿರ್ಮಾಣಮಾಡಬೇಕು. ದೇವಾಲಯದ ಎಡಭಾಗದ ಮಂಟಪದಲ್ಲಿ ವೈದ್ಯಕೀಯ ಸೇವೆಯ ಕೌಂಟರ್ ತೆರೆಯಬೇಕು ಎಂದರು.
ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಐತಿಹಾಸಿಕ ವೈರಮುಡಿ ಉತ್ಸವದ ಸಂಭ್ರಮದ ಕ್ಷಣಗಳನ್ನು ಜಿಲ್ಲಾದ್ಯಂತ ಭಕ್ತರು ಕಣ್ತುಂಬಿಕೊಳ್ಳಲು ಜಕ್ಕನಹಳ್ಳಿ, ಬೆಳ್ಳಾಳೆ, ಮಹದೇಶ್ವರಪುರ, ಕೆನ್ನಾಳು ಪ್ರಮುಖ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬೃಹತ್ ಪರದೆಗಳನ್ನು ಅಳವಡಿಸಬೇಕು. ಜಿಲ್ಲಾಕೇಂದ್ರ, ತಾಲೂಕು ಕೇಂದ್ರಗಳಲ್ಲಿ ನಗರಸಭೆಯ ಎಲ್‌ಇಡಿ ಪರದೆಗಳನ್ನೇ ಬಳಸಿ ವೈರಮುಡಿ ಉತ್ಸವ ನೇರಪ್ರಸಾರ ಬಿತ್ತರಿಸಬೇಕು. ಮೇಲುಕೋಟೆಯ ಉತ್ಸವ ಬೀದಿಗಳಲ್ಲಿ ಹೆಚ್ಚು ಬೃಹತ್ ಪರದೆಗಳನ್ನು ಅಳವಡಿಸಬೇಕು. ಬಸ್ ನಿಲ್ದಾಣದ ಬಳಿ ಸಹ ಹೆಚ್ಚುವರಿಯಾಗಿ ಎಲ್‌ಇಡಿ ಪರದೆಗಳನ್ನು ಅಳವಡಿಸಬೇಕು ಎಂದರು.
ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿ ಸಲಹೆ ನೀಡಿದ ಎಡಿಸಿ, ಭಕ್ತರ ವಾಹನಗಳಿಗೆ ವ್ಯವಸ್ಥಿತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕಡೆ ಉತ್ತಮವಾದ ಬೆಳಕಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ವಿವಿಧ ಪುರಸಭೆ ಮತ್ತು ನಗರಸಭೆಗಳಿಂದ ಪೌರಕಾರ್ಮಿಕರನ್ನು ಕರೆಸಿಕೊಂಡು ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನಿರ್ಣಯದಂತೆ ವಿವಿಧ ಇಲಾಖಾಧಿಕಾರಿಗಳು ಎರಡು ದಿನಗಳಲ್ಲಿ ಸಿದ್ಧತೆ ಮಾಡಬೇಕು ಎಂದರು.
ಈ ಭಾರಿ ವಿಭಿನ್ನ ಹಾಗೂ ವೈಭವದ ರಾಜಮುಡಿ ತೆಪ್ಪೋತ್ಸವ
ಏ.11ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ರಾಜಮುಡಿ ತೆಪ್ಪೋತ್ಸವ ಶ್ರೀ ವೈಷ್ಣವ ಸಂಪ್ರದಾಯದಂತೆ ಸಾಂಸ್ಕೃತಿಕ ವಿಶೇಷದೊಂದಿಗೆ ಆಚರಿಸಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಮ್ಯಾಂಡೋಲಿನ್, ಚಂಡೆವಾದನ, ನಾದಸ್ವರ ವಾದನದೊಂದಿಗೆ ತೆಪ್ಪೋತ್ಸವ ನಡೆಸಲಾಗುತ್ತದೆ. ಕಲ್ಯಾಣಿಗೆ ವಿಶೇಷ ದೀಪಾಲಂಕಾರ, ತೆಪ್ಪಮಂಟಪಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಿಸಿ ಮೇಲುಕೋಟೆ ಮಹತ್ವ ಬಿಂಬಿಸುವ ಲೇಸರ್ ಶೋ ಹಮ್ಮಿಕೊಳ್ಳಬೇಕು ಎಂದರು.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ತಹಸೀಲ್ದಾರ್ ಸಂತೋಷ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶಮೂರ್ತಿ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ದೇವಾಲಯದ ಇಒ ಶೀಲಾ ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
24 ಗಂಟೆ ಪ್ರಸಾದ ವಿತರಣೆ
ಏ.7ರ ವೈರಮುಡಿ ಉತ್ಸವದಂದು ದಿನದ 24 ಗಂಟೆಯೂ ಅನ್ನದಾನ ಮಾಡಲು ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಪ್ರಸಾದ ವಿತರಿಸಲು 8 ಕೌಂಟರ್ ನಿರ್ಮಾಣ ಮಾಡಿ ಎಂದು ತಿಳಿಸಿದರು.
ವೈರಮುಡಿ ಜಾತ್ರಾಮಹೋತ್ಸವ ನಡೆಯುವ ಹತ್ತು ದಿನಗಳಂದು ಒಂದೊಂದು ದಿನ ಅನ್ನದಾನ ಮಾಡಲು ಅವಕಾಶವಿದೆ. ಅನ್ನದಾನ ಮಾಡಲು ಇಚ್ಛಿಸುವ ದಾನಿಗಳು ಅಥವಾ ಸಂಘ ಸಂಸ್ಥೆಯವರು ಜಿಲ್ಲಾಡಳಿತ ಅಥವಾ ದೇವಾಲಯದ ಕಚೇರಿಯನ್ನು ಸಂಪರ್ಕಿಸಬಹುದು. ಅನ್ನದಾನಕ್ಕೆ ಅಕ್ಕಿ, ಬೇಳೆ, ಎಣ್ಣೆ ತರಕಾರಿಗಳನ್ನು ಭಕ್ತರು ನೀಡಲು ಅವಕಾಶವಿದೆ ಎಂದರು.