

ಮೈಸೂರು: ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಮುಂದಿನ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುತ್ತದೆ ಎಂದು ಮಂಡ್ಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಸಿ.ಎ.ದೀಪಕ್ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಆಲನಹಳ್ಳಿ ಬಡಾವಣೆಯಲ್ಲಿರುವ ಯುರೋ ಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಲಾ ವಾತಾವರಣಕ್ಕೂ ಮೊದಲು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮನೆಯನ್ನು ಬಿಟ್ಟು, ಶಾಲೆಗೆ ಬಂದ ಮಕ್ಕಳಿಗೆ ಸ್ವಾವಲಂಬನೆ, ಆಸಕ್ತಿ, ಕಲಿಕೆ, ವಿವಿಧ ಆಟೋಟಗಳು, ಸಹಪಾಠಿ ಮಕ್ಕಳ ಜತೆ ಬೆರೆಯುವುದನ್ನು ಕಲಿಸುತ್ತದೆ ಎಂದರು.
ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣ ಸಂಸ್ಥೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವಿಷಯ ಜ್ಞಾನದ ಜೊತೆಗೆ ನಾವು ಬದುಕುವ ಕಲೆಯನ್ನು ಕಲಿಸುವುದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಕ್ರಿಯಾಶೀಲತೆ ಬೆಳೆಸುವುದು ಅತ್ಯಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಯುರೋ ಕಿಡ್ಸ್‌ನ ಮುಖ್ಯಸ್ಥ ಎಚ್.ಸಿ.ಕೃಷ್ಣೇಗೌಡ ಹಾಗಲಹಳ್ಳಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಶಾಲಾ ವಾರ್ಷಿಕೋತ್ಸವಗಳು ಅಡಿಪಾಯವನ್ನು ಹಾಕುವುದರ ಜತೆಗೆ ಪ್ರತಿಭೆ ಗುರುತಿಸುವಲ್ಲಿ ಮುಖ್ಯವಾಗುತ್ತದೆ. ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ವೈದ್ಯೆ ಡಾ.ಯೋಗಿತಾ, ಯುರೋ ಕಿಡ್ಸ್‌ನ ವ್ಯವಸ್ಥಾಪಕಿ ಶಿಲ್ಪಾ ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ಚೈತ್ರಾ, ಮೌರ್ಯ ಕೃಷ್ಣೇಗೌಡ ಇತರರು ಇದ್ದರು. ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.