

ಮಂಗಳೂರು: ಮುಂಗಾರು ಪೂರ್ವ ಗಾಳಿ, ಮಳೆಗೆ ವಿದ್ಯುತ್ ಕಂಬಗಳು, ಪರಿವರ್ತಕಗಳು ಸೇರಿದಂತೆ 963.22 ಲಕ್ಷ ರೂ.ಮೊತ್ತದ ಮೆಸ್ಕಾಂ ಅಸ್ತಿಗಳಿಗೆ ಹಾನಿಯಾಗಿದೆ.
2024ರ ಏ. 1 ರಿಂದ ಮೇ 31 ರ ಅವಧಿಯಲ್ಲಿ ಗಾಳಿ, ಮಳೆಗೆ ಮೆಸ್ಕಾಂ ವ್ಯಾಪ್ತಿಯ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ 353.01 ಲಕ್ಷ ರೂ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 241.72 ಲಕ್ಷ ರೂ. ಮೊತ್ತದ ಆಸ್ತಿಗಳಿಗೆ ಹಾನಿಯಾಗಿದೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ 200.79 ಲಕ್ಷ ರೂ. ಮತ್ತು ಶಿವಮೊಗ್ಗದಲ್ಲಿ 167.70 ಲಕ್ಷ ರೂ.ಮೊತ್ತದ ಆಸ್ತಿಗಳು ಹಾನಿಗೊಳಗಾಗಿದ್ದು, ಬಹುತೇಕ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ ವ್ಯವಸ್ಥೆ ಸರಿಪಡಿಸುವ ಕಾರ್ಯ ಮುಂದುವರಿದಿದೆ ಎಂದು ಮೆಸ್ಕಾಂ ತಿಳಿಸಿದೆ.
5,883 ಕಂಬಗಳು ಧರಾಶಾಯಿ: ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಗಾಳಿ-ಮಳೆಗೆ ಒಟ್ಟು 5,883 ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 2,066 ಕಂಬಗಳಿಗೆ ಹಾನಿಯಾಗಿದೆ. ಶಿವಮೊಗ್ಗದಲ್ಲಿ 1,564, ದಕ್ಷಿಣ ಕನ್ನಡದಲ್ಲಿ 1,306, ಉಡುಪಿ ಜಿಲ್ಲೆಯಲ್ಲಿ 947 ಕಂಬಗಳು ಹಾನಿಗೊಳಗಾಗಿವೆ. ಈಗಾಗಲೇ ಹಾನಿಗೊಳಗಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ.
ಒಟ್ಟಾರೆ 165 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿವೆ. ದಕ್ಷಿಣ ಕನ್ನಡದಲ್ಲಿ 26, ಉಡುಪಿ ಜಿಲ್ಲೆಯಲ್ಲಿ 20, ಶಿವಮೊಗ್ಗದಲ್ಲಿ 119 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿವೆ.ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಹಾನಿ ಸಂಭವಿಸಿದ್ದು, ಎಲ್ಲಾ ಪರಿವರ್ತಕಗಳನ್ನು ದುರಸ್ತಿಗೊಳಿಸಲಾಗಿದೆ.
157.72 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65.30 ಕಿ.ಮೀ., ಉಡುಪಿ ಜಿಲ್ಲೆಯಲ್ಲಿ 18.56 ಕಿ.ಮೀ., ಚಿಕ್ಕಮಗಳೂರು ಜಿಲ್ಲೆಯಲ್ಲಿ 41.32 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 31.54 ಕಿ.ಮಿ.ವಿದ್ಯುತ್ ಮಾರ್ಗಹಾನಿಗೊಂಡಿದ್ದು, ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಹಕರಿಸಲು ಮನವಿ
ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಅವಿರತವಾಗಿ ಶ್ರಮಿಸಿ, ಗ್ರಾಹಕರ ಸಹಕಾರದಿಂದ ವಿದ್ಯುತ್ ಪೊರೈಕೆಯಲ್ಲಿನ ಅಡಚಣೆಗಳನ್ನು ಸರಿಪಡಿಸುತ್ತಿದ್ದಾರೆ. ಇನ್ನೂ ಹಲವೆಡೆ ದುರಸ್ಥಿ ಕಾರ್ಯ ಮುಂದುವರಿದಿದ್ದು , ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.